“ಬೇಸಿಗೆ ಅವಧಿ ಆರಂಭ ಆಗುತ್ತಿರುವದರಿಂದ ಧಾರವಾಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಹೆಸ್ಕಾಂ ಕ್ರಮವಹಿಸಬೇಕು. ಸರ್ಕಾರದ ನಿಯಮದಂತೆ ಕೃಷಿ ಪಂಪ್‍ಸೆಟ್‍ಗಳಿಗೆ ಪ್ರತಿದಿನ 7 ಗಂಟೆ ವಿದ್ಯುತ್ ಪೂರೈಸಿ, ರೈತರಿಗೆ ಅನುಕೂಲವಾಗುವಂತೆ ಆದಷ್ಟು ಹಗಲು ಹೊತ್ತಿನಲ್ಲಿ ಅಥವಾ ಸಂಜೆ ಹೊತ್ತಿನಲ್ಲಿ ವಿದ್ಯುತ್ ಪೂರೈಸಬೇಕು” ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಹೆಸ್ಕಾಂ ಸಂಸ್ಥೆಯ ವಿವಿಧ ಕಾಮಗಾರಿಗಳ ಪ್ರಗತಿ ಹಾಗೂ ಬೇಸಿಗೆ ಅವಧಿಯ ವಿದ್ಯುತ್ ಪೂರೈಕೆ ಸಿದ್ದತೆ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ಸಭೆಯನ್ನು ಸಚಿವರು ನಡೆಸಿದರು.
“ಜಿಲ್ಲೆಯಲ್ಲಿ 67 ಕೃಷಿ ವಿದ್ಯುತ್ ಫೀಡರ್‌ಗಳಿವೆ. ಇದರಲ್ಲಿ 41 ಫೀಡರ್‌ಗಳಿಂದ ಬೆಳಿಗ್ಗೆ 7 ರಿಂದ ಸಂಜೆ 4 ಗಂಟೆಯೊಳಗೆ, 12 ಫೀಡರ್‌ಗಳಿಗೆ ಸಂಜೆ 6 ರಿಂದ ರಾತ್ರಿ 9 ಗಂಟೆ ಹಾಗೂ ರಾತ್ರಿ 10 ರಿಂದ ಮಧ್ಯರಾತ್ರಿ 1 ಗಂಟೆಯೊಳಗೆ ಮತ್ತು 8 ಫೀಡರ್‌ಗಳಿಂದ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮತ್ತು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಹೀಗೆ ನಿಗದಿತ ಫೀಡರ್‌ಗಳಿಂದ ವಿವಿಧ ಅವಧಿಯಲ್ಲಿ ಒಟ್ಟು 7 ತಾಸು ಕೃಷಿ ಚಟುವಟಿಕೆಗಳಿಗಾಗಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ” ಎಂದು ಸಚಿವರು ಹೇಳಿದರು.
“ಹಿಂಗಾರು ಗೋಧಿ, ಭತ್ತ, ಕಬ್ಬು ಬೆಳೆಗಳಿಗೆ ನೀರಿನ ಅಗತ್ಯವಿದ್ದು, ರೈತರು ನೀರಾವರಿಗಾಗಿ ಕೊಳವೆಬಾವಿಗಳ ಹೆಚ್ಚು ಅವಲಂಬನೆ ಆಗಿದ್ದಾರೆ. ಕಲಘಟಗಿ, ಅಳ್ನಾವರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ, ತಡ ರಾತ್ರಿ ವಿದ್ಯುತ್ ನೀಡುವುದಿಂದ ನೀರು ಹಾಯಿಸಲು ತೊಂದರೆ ಆಗುತ್ತಿದೆ ಎಂದು ರೈತರು ಕರೆ ಮಾಡಿ, ಸಮಸ್ಯೆ ಹೇಳುತ್ತಿದ್ದಾರೆ” ಎಂದರು.
“ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆಯನ್ನು ಶಿಫ್ಟ್ ಆಧಾರದಲ್ಲಿ ಮಾಡಿದರೂ ಪರವಾಗಿಲ್ಲ, ಆದರೆ ತೀರಾ ಮಧ್ಯರಾತ್ರಿ ವಿದ್ಯುತ್ ಪೂರೈಸಿದರೆ, ರಾತ್ರಿ ಹೊತ್ತಲ್ಲಿ ರೈತರಿಗೆ ತೊಂದರೆ ಆಗುತ್ತದೆ. ಇದನ್ನು ಪರಿಶೀಲಿಸಿ ಕ್ರಮವಹಿಸಬೇಕು” ಎಂದು ತಿಳಿಸಿದರು.
“ನಿಗದಿ ಮತ್ತು ಅರಳಿಕಟ್ಟಿ ಕ್ರಾಸ್, ಬಮ್ಮಿಗಟ್ಟಿ ಸೇರಿ ಮೂರು ಗ್ರಾಮಗಳಿಗೆ ಹೊಸದಾಗಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಸರ್ಕಾರದಿಂದ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಟೆಂಡರ್, ಗುತ್ತಿಗೆದಾರ ಸಮಸ್ಯೆಗಳಿಂದ ವಿಳಂಬವಾಗುತ್ತಿದೆ” ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, “ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದೆ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ವಿತರಣೆ ಬಗ್ಗೆ ಸರಿಯಾದ ಕ್ರಮವಹಿಸಬೇಕು. ಕಾಮಗಾರಿಗಳನ್ನು ತೀವ್ರಗೊಳಿಸಿ, ಬೇಗ ಮುಗಿಸಬೇಕು. ರೈತರು ಟಿಸಿ ಬಯಸಿದಲ್ಲಿ ಬೇಗನೆ ಪೂರೈಸಬೇಕು. ಅಗತ್ಯಗಳಿಗೆ ಅನುಗುಣವಾಗಿ ಟಿಸಿಗಳ ಹೆಚ್ಚು ದಾಸ್ತಾನು ಹೊಂದಬೇಕು” ಎಂದು ತಿಳಿಸಿದರು.

