ಕರುನಾಡ ಚಕ್ರವರ್ತಿ, ಅಭಿಮಾನಿಗಳ ಪಾಲಿನ ಹ್ಯಾಟ್ರಿಕ್ ಹಿರೋ ನಟ ಶಿವರಾಜ್ಕುಮಾರ್. ಪ್ರೀತಿಯಿಂದ ಶಿವಣ್ಣ ಎಂದು ಕರೆಸಿಕೊಳ್ಳುವ ಶಿವರಾಜ್ಕುಮಾರ್ ಚಿತ್ರರಂಗದಲ್ಲಿ 4 ದಶಕಗಳನ್ನು ಪೂರೈಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಶಿವರಾಜ್ಕುಮಾರ್ ಅವರಿಗೆ ಶುಭ ಹಾರೈಸುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ.
ಸಿದ್ದರಾಮಯ್ಯ ಪೋಸ್ಟ್: ಸಿದ್ದರಾಮಯ್ಯ, ‘ಕನ್ನಡ ಚಿತ್ರರಂಗದಲ್ಲಿ ಸಾರ್ಥಕ 4 ದಶಕಗಳನ್ನು ಪೂರೈಸಿರುವ ಖ್ಯಾತ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಅಭಿನಂದನೆಗಳು. ಬಿಡುವಿನ ವೇಳೆ ಶಿವರಾಜ್ ಕುಮಾರ್ ಅವರ ಹಲವು ಸಿನಿಮಾಗಳನ್ನು ನಾನು ನೋಡಿ ಆನಂದಿಸಿದ್ದೇನೆ’ ಎಂದು ಹೇಳಿದ್ದಾರೆ.
‘ರಥಸಪ್ತಮಿ, ಜನುಮದ ಜೋಡಿ, ಜೋಡಿಹಕ್ಕಿ, ಟಗರು ಹೀಗೆ ಸಾಲು ಸಾಲು ಹಿಟ್ ಸಿನೆಮಾಗಳ ಮೂಲಕ ಕನ್ನಡ ಚಿತ್ರರಂಗದ ಕೀರ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಶಿವರಾಜ್ ಕುಮಾರ್ ಅವರ ಅಭಿನಯಕ್ಕೆ ಅವರೇ ಸಾಟಿ’ ಎಂದು ಬಣ್ಣಿಸಿದ್ದಾರೆ.
‘ಕಲಾಸೇವೆಯ ಜೊತೆ ಸಾಮಾಜಿಕ ಸೇವೆಯಲ್ಲೂ ನಿರತರಾಗಿರುವ ಕನ್ನಡಿಗರ ಪ್ರೀತಿಯ ಶಿವಣ್ಣನಿಗೆ ಭಗವಂತ ಆಯುರಾರೋಗ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದಾರೆ.
ಶಿವರಾಜ್ ಕುಮಾರ್ 63ನೇ ವಯಸ್ಸಿನಲ್ಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಟಗರು-2′, ಜೈಲರ್-2 ಮುಂತಾದ ಹೊಸ ಚಿತ್ರಗಳ ಘೋಷಣೆಯಾಗಿದೆ. ಈಗ ಅವರು ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.
ಶಿವಣ್ಣ ಮೊದಲ ಸಿನಿಮಾ ಜರ್ನಿ ಆರಂಭವಾಗಿದ್ದು 23ನೇ ವಯಸ್ಸಿಗೆ. ಕಳೆದ 40 ವರ್ಷಗಳಿಂದ ಅವರು ನಿರಂತರವಾಗಿ ಸಿನಿಮಾಗಳು ಮಾಡುತ್ತಾ ಬರುತ್ತಿದ್ದಾರೆ. ನೂರಾರು ಚಿತ್ರಗಳನ್ನು ನೀಡಿದ್ದಾರೆ. ಹಲವಾರು ಸೂಪರ್ ಹಿಟ್ ಸಿನಿಮಾಗಳು ಸೇರಿವೆ.
ಸಾಮಾಜಿಕ ಜಾಲತಾಣದಲ್ಲಿ ಶಿವರಾಜ್ ಕುಮಾರ್ 4 ದಶಕದ ಸಿನಿಮಾ ಪಯಣಕ್ಕೆ ನಟರು, ನಟಿಯರು, ಅಭಿಮಾನಿಗಳು ಪೋಸ್ಟರ್ಗಳನ್ನು ಹಂಚಿಕೊಳ್ಳುವ ಮೂಲಕ ಶುಭ ಹಾರೈಸುತ್ತಿದ್ದಾರೆ.
ಶಿವಣ್ಣ1986ರ ಜೂನ್ 19ರಂದು ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನದ ಆನಂದ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇತ್ತೀಚಿಗೆ ಬಿಡುಗಡೆಯಾದ ಅವರ ಚಿತ್ರ 45. 130ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶಿವಣ್ಣ ನಟನೆಯ ಜೈಲರ್-2, ಪೆದ್ದಿ ಬಿಡುಗಡೆ ಹಂತದಲ್ಲಿವೆ.

