ಬಾಗಲಕೋಟೆ: ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಚಪ್ಪಲಿ ತೂರಾಟ ನಡೆದಿರುವ ಘಟನೆ ಬೆನ್ನಲ್ಲೇ ಪೊಲೀಸರು 8 ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಬಾಗಲಕೋಟೆಯಲ್ಲಿ ಮತ್ತೆ ಕಲ್ಲುತೂರಾಟ ನಡೆದಿದೆ.
ಬಾಗಲಕೋಟೆಯ ಕಿಲ್ಲಾ ಓಟಿಯಲ್ಲಿ ಮಾಂಸದ ಅಂಗಡಿಗಳ ಮೇಲೆ ಕಿಡಿಗೇಡಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟ ನಡೆಯುತ್ತಿದ್ದಂತೆ ತಕ್ಷಣ ಅಲರ್ಟ್ ಆದ ಪೊಲೀಸರು ಕಿಡಿಗೇಗಳನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿದ್ದಾರೆ.
ಈ ವೇಳೆ ಪೊಲೀಸರು ಹಾಗೂ ಹಿಂದೂ ಕಾರ್ಯಕರ್ತರ ನಡುವೆ ವಗ್ವಾದ ನಡೆದಿದೆ, ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಪೊಲೀಸರು ಕಿಡಿಗೇಡಿಗಳನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿ ಏಟಿಗೆ ಕಿಡಿಗೇಡಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ನಿನ್ನೆ ಶಿವಾಜಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು, ಕಲ್ಲು ತೂರಾಟದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಸಾರ್ವಜನಿಕ ಗಾಯಗೊಂಡಿದ್ದಾರೆ, ಕಲ್ಲು, ಚಪ್ಪಲಿ ತೂರಾಟದಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಕಲ್ಲು ತೂರಾಟದ ವೇಳೆ ತರಕಾರಿ ಮಾರುಕಟ್ಟೆಯ ಮೂರು ತಳ್ಳುಗಾಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆಯೂ ನಡೆದಿದೆ. ಎಚ್ಚೆತ್ತ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ, ಕೂಡಲೇ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
ಘಟನೆ ನಡೆದ ಮರು ಕ್ಷಣವೇ ಜನರನ್ನು ಚದುರಿಸಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ನಿಷೇಧಾಜ್ಞೆ ಜಾರಿ ಮಾಡಿದ್ದರು. ಅಲ್ಲದೇ ಕಲ್ಲು ತೂರಾಟ ನಡೆಸಿದ್ದ 8 ಆರೋಪಿಗಳನ್ನು ಬಂಧಿಸಿದ್ದಾರೆ. ಆದಾಗ್ಯೂ ಇಂದು ಕಿಲ್ಲಾ ಓಣಿಯಲ್ಲಿ ಮತ್ತೆ ಕಲ್ಲು ತೂರಾಟ ನಡೆದಿದೆ.

