ಕೊಪ್ಪಳ: ಶೀಲ ಶಂಕಿಸಿ ಪತ್ನಿ ಹಾಗೂ ಪುತ್ರಿಯನ್ನು ಕೊಲೆ ಮಾಡಿದ ವ್ಯಕ್ತಿಗೆ ಕೊಪ್ಪಳ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಕೊಪ್ಪಳ ನಗರ ಪೋಲಿಸ್ ಠಾಣೆ ವ್ಯಾಪ್ತಿಯ ಕೊಪ್ಪಳದ ಹಮಾಲರ ಕಾಲೋನಿಯಲ್ಲಿರುವ ಅಪರಾಧಿ ಸುಲೇಮಾನ ಅನ್ಸಾರಿ ತನ್ನ ಪತ್ನಿ ಮುನ್ನಿಬೇಗಂ ಶೀಲದ ಮೇಲೆ ಸಂಶಯಪಟ್ಟು ಮತ್ತು ವರದಕ್ಷಿಣೆ ಕಿರುಕುಳ ನೀಡಿ ಮನೆಯ ಮೇಲ್ಗಡೆ ಇರುವ ರೂಮಿನಲ್ಲಿ ತಲೆ ದಿಂಬಿನಿಂದ ಮುನ್ನಿಬೆಗಂ ಹಾಗೂ ತನ್ನ ಎರಡು ತಿಂಗಳ ಹೆಣ್ಣು ಮಗು ರಾಹಿನ್ ಪರ್ವಿನ್ ಇವರನ್ನು ಆಪಾಧಿತನು ಉಸಿರುಗಟ್ಟಿಸಿ(ಇಬ್ಬರನ್ನು) ಕೊಲೆ ಮಾಡಿದ ಅಪರಾಧ ಸಾಬೀತಾಗಿದೆ ಎಂದು ಕೊಪ್ಪಳದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಈ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 1,05,000 ರೂ. ದಂಡ ವಿಧಿಸಿರುತ್ತಾರೆ.
ಕೊಪ್ಪಳ ನಗರ ಪೋಲಿಸ್ ಠಾಣೆ ವ್ಯಾಪ್ತಿಯ ಕೊಪ್ಪಳ ಹಮಾಲರ ಕಾಲೋನಿಯಲ್ಲಿ ಅಪರಾಧಿ ಸುಲೇಮಾನ ಅನ್ಸಾರಿ ಈತನು ತನ್ನ ಹೆಂಡತಿಯಾದ ಮೃತ ಮುನ್ನಿಬೇಗಂ ಇವಳ ಶೀಲದ ಮೇಲೆ ಸಂಶಯಪಡುತ್ತಾ, ತನ್ನ ಹೆಂಡತಿಗೆ ತವರು ಮನೆಯಿಂದ ಆಟೋ ಖರೀದಿಸಲು ಒಂದು ಲಕ್ಷ ರೂಪಾಯಿ ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡಿ, ಅವಾಚ್ಯ ಶಬ್ದಗಳಿಂದ ಬೈದು ಹೊಡಿ ಬಡಿ ಮಾಡಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಮಾಡುತ್ತಿದ್ದ.
ತನಗೆ ರೂ. 50,000 ರೂ. ಹಣ, ಎರಡು ತೊಲೆ ಬಂಗಾರ ಹಾಗೂ ಒಂದು ಟಾಟಾ ಎ.ಸಿ ವಾಹನ ಕೊಡಿಸಿರುವುದಿಲ್ಲ ಹಾಗೂ ನೀನು ಮನೆ ಕೆಲಸ ಸರಿಯಾಗಿ ಮಾಡುತ್ತಿಲ್ಲ ಅಂತಾ ತನ್ನ ಹೆಂಡತಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿ, ತನ್ನ ಹೆಂಡತಿಯ ಶೀಲದ ಮೇಲೆ ವಿನಾ ಕಾರಣ ಸಂಶಯ ವ್ಯಕ್ತಪಡಿಸಿ ದಿ: 02-08-2016 ರಂದು ಮೃತ ಮುನ್ನಿಬೇಗಂ ಇವರ ಅಣ್ಣನ ಮನೆಯ ಮೇಲ್ಗಡೆ ಇರುವ ರೂಮಿನಲ್ಲಿ ತಲೆ ದಿಂಬಿನಿಂದ ಮುನ್ನಿಬೇಗಂ ಹಾಗೂ ಆಕೆಯ ಎರಡು ತಿಂಗಳ ಹೆಣ್ಣು ಮಗು ರಾಹಿನ್ ಪರ್ವಿನ್ ಇವರನ್ನು ಅಪರಾಧಿಯು ಉಸಿರುಗಟ್ಟಿಸಿ ಕೊಲೆ ಮಾಡಿದ್ದ.
ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖಾಧಿಕಾರಿಗಳಾದ ಕಟ್ಟಮನಿ ಎಸ್.ಬಿ., ಡಿವೈ.ಎಸ್.ಪಿ ಉಪ-ಅಧೀಕ್ಷಕರು ಕೊಪ್ಪಳ ಇವರು ತನಿಖೆಯಲ್ಲಿ ಆರೋಪಗಳು ಸಾಬೀತಾಗಿದ್ದರಿಂದ ಆರೋಪಿತರ ವಿರುದ್ದ ದೋಷಾರೋಪಣೆ ಪಟ್ಟಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಕೊಪ್ಪಳ ಹಮಾಲರ ಕಾಲೋನಿಯಲ್ಲಿರುವ ಅಪರಾಧಿ ಸುಲೇಮಾನ ಅನ್ಸಾರಿ ಮೇಲಿರುವ ಆರೋಪಗಳು ಸಾಬೀತಾಗಿವೆ ಎಂದು ದಿ: 04-02-2026 ರಂದು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಚಂದ್ರಶೇಖರ ಅವರು, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 1,05,000 ರೂ. ದಂಡ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಅಂಬಣ್ಣ ಟಿ. ಮತ್ತು ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಎಂ. ಅವರು ಸರ್ಕಾರದ ಪರವಾಗಿ ಪ್ರಕರಣ ನಡೆಸಿ ವಾದ ಮಂಡಿಸಿರುತ್ತಾರೆ. ಈ ಪ್ರಕರಣದಲ್ಲಿನ ಕೊಪ್ಪಳ ನಗರ ಪೊಲೀಸರಾದ ಸೂರ್ಯಕಾಂತ, ಸಂಗಮೇಶ, ಲತೀಫ್, ಗವಿಸಿದ್ದಪ್ಪ, ಮಂಜುನಾಥ ಇವರು ಸಾಕ್ಷಿದಾರರನ್ನು ಸರಿಯಾದ ಸಮಯಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ ಎಂದು ಕೊಪ್ಪಳದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

