ಬೆಂಗಳೂರು: ಮುಂದಿನ 2028ರ ವಿಧಾನಸಭೆ ಚುನಾವಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಎದುರಿಸಿ ಅಭೂತಪೂರ್ವ ಗೆಲುವು ಸಾಧಿಸಲು ಶ್ರಮಿಸೋಣ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಹೇಳಿದ್ದಾರೆ.
ಗುರುವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಮಂಡಲದಲ್ಲಿ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಭ್ರಷ್ಟ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸಿದ್ದಾರೆ. ವಿಧಾನಸಭೆಯ ಹೊರಗೆ ವಿಜಯೇಂದ್ರ ಹೋರಾಟ ನಡೆಸುತ್ತಿದ್ದಾರೆ. ಈ ಮೂವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಯನ್ನು ವಿಜಯೇಂದ್ರ ತಂಡದ ನೇತೃತ್ವದಲ್ಲಿ ಎದುರಿಸಿ ಗೆಲುವು ಸಾಧಿಸಲಾಗುವುದು. ಸಣ್ಣ ಮತ್ತು ದೊಡ್ಡ ಕಾರ್ಯಕ್ರಮಗಳ ಮೂಲಕ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಬೇಕು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಮುಸ್ಲಿಂ ಓಲೈಕೆ, ಹದಗೆಟ್ಟ ಕಾನೂನು ಸುವ್ಯವಸ್ಥೆ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಕರೆ ನೀಡಿದ್ದಾರೆ.

