ಬೆಂಗಳೂರು ನಗರದ ಕಸದ ಲಾರಿಗಳನ್ನು ತಡೆದು ಪ್ರತಿಭಟನೆ ಮಾಡಿರುವುದು ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ದೊಡ್ಡಬಳ್ಳಾಪುರ ಬಿಜೆಪಿ ಶಾಸಕ ಧೀರಜ್ ಮುನಿರಾಜು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಎಂ.ಎಸ್.ಜಿ.ಪಿ. ಘಟಕಕ್ಕೆ ಹೆಚ್ಚುವರಿ ಕಸ ವಿಲೇವಾರಿಯಾಗುತ್ತದೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ಸ್ಥಳೀಯರ ಸಹಕಾರದೊಂದಿಗೆ ಹೆಚ್ಚುವರಿ ಲಾರಿಗಳನ್ನು ತಡೆಹಿಡಿದು ಬುಧವಾರ ಪ್ರತಿಭಟನೆ ನಡೆಸಲಾಗಿತ್ತು.
ಪ್ರತಿನಿತ್ಯ 75 ಕಸದ ವಾಹನಗಳು ಬರಲು ಅನುಮತಿ ಇದೆ. ಆದರೆ ಲೆಕ್ಕಕ್ಕಿಂತಲೂ ಹೆಚ್ಚು ವಾಹನಗಳು ಬರುತ್ತಿವೆ. ಇದೇ ರೀತಿ ಮುಂದುವರೆದರೆ ಸೂಕ್ತ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಶಾಸಕ ಧೀರಜ್ ಮುನಿರಾಜು ಆಕ್ರೋಶ ವ್ಯಕ್ತಪಡಿಸಿದ್ದರು.
ಡಿ.ಕೆ.ಶಿವಕುಮಾರ್ ಹೇಳಿಕೆ: ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ನಗರದಲ್ಲಿ ಕಸ ವಿಲೇವಾರಿಗೆ ಅಡ್ಡಿಪಡಿಸಿದರೆ ಎಸ್ಮಾ ಜಾರಿಗೊಳಿಸಲಾಗುವುದು. ಅವರ ಮನೆ ಮುಂದೆ ಕಸ ಸುರಿಯಲಾಗುವುದು” ಎಂದು ಎಚ್ಚರಿಕೆ ನೀಡಿದ್ದರು.
ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಧೀರಜ್ ಮುನಿರಾಜು, “ಎಸ್ಮಾ ಜಾರಿಗೊಳಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಎಸ್ಮಾ ಹಾಕಿದರೆ ಜೈಲಿಗೆ ಹೋಗಲು ನಾನು ಸಿದ್ಧನಿದ್ದೇನೆ” ಎಂದು ಹೇಳಿದರು.
“ನಮ್ಮ ತಾಲೂಕಿನಲ್ಲಿ ಬೇರೆ ಕಡೆ ಹಾಕಬೇಕಿದ್ದ ಹೆಚ್ಚುವರಿ ಕಸವನ್ನು ಇಲ್ಲಿಗೆ ತರಲಾಗುತ್ತಿದೆ. ಹೆಚ್ಚುವರಿ ಲಾರಿಗಳನ್ನು ಬಿಡಲ್ಲ. ಪ್ರತಿನಿತ್ಯ 75 ಕಸದ ವಾಹನಗಳು ಬರಲು ಅನುಮತಿ ಇದೆ ಅದನ್ನು ಪಾಲನೆ ಮಾಡಿ” ಎಂದು ತಿಳಿಸಿದರು.
“ತಾವು ಮಾಡಿರುವ ಕಾನೂನು, ತಾವು ಮಾಡಿರುವ ನಿಯಮ, ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜಿಬಿಎ ಸಭೆಯಲ್ಲಿ ಅನುಮೋದಿಸಿದ ನಿಯಮ. ಮಹದೇವಪುರ, ಬ್ಯಾಟರಾಯನಪುರದಲ್ಲಿ ಸುರಿಯಬೇಕಾದ ಕಸವನ್ನು ಇಲ್ಲಿಗೆ ತರಲು ಬಿಡುವುದಿಲ್ಲ” ಎಂದರು.
“ನಮ್ಮ ಪ್ರಾಣ ಹೋದರೂ ಪರವಾಗಿಲ್ಲ. ನಮ್ಮ ಮನೆಗೆ ತಂದು ಸುರಿಯುತ್ತೀರಿ ಎಂದು ಹೇಳಿದ್ದೀರಿ. ಬಿಜೆಪಿ ಕಚೇರಿ, ಅಶೋಕಣ್ಣ, ವಿಜಯೇಂದ್ರ ಅಣ್ಣ ಎಲ್ಲಾ ಬೇಡ ಕಾನೂನಿನಲ್ಲಿ ಅವಕಾಶ ಇದ್ದರೆ ನಮ್ಮ ಮನೆಯ ಮುಂದೆ ತಂದು ಸುರಿಯಿರಿ” ಎಂದು ಡಿ.ಕೆ.ಶಿವಕುಮಾರ್ಗೆ ತಿರುಗೇಟು ನೀಡಿದರು.
ಶುಕ್ರವಾರವೂ ಕಸದ ಸಮಸ್ಯೆ ಮುಂದುವರೆದಿದೆ. ಲಾರಿಗಳನ್ನು ತಡೆಯಲಾಗಿದೆ. ಲಾರಿಗಳು ಮುಂದೆ ಸಾಗದಂತೆ ಸ್ಥಳೀಯರು ಟ್ರಾಕ್ಟರ್ಗಳನ್ನು ಅಡ್ಡವಾಗಿ ನಿಲ್ಲಿಸಿದ್ದಾರೆ. ಸರ್ಕಾರ ಸಮಸ್ಯೆಯನ್ನು ಹೇಗೆ ಬಗೆಹರಿಸಲಿದೆ? ಎಂದು ಕಾದು ನೋಡಬೇಕಿದೆ.

