ಆರೋಗ್ಯ ಇಲಾಖೆ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಡುವೆ ಜಟಾಪಟಿ ನಡೆಯುತ್ತಿದೆ. ಅಶೋಕ ‘ಅಧಿಕಾರವಿಲ್ಲದೆ ಹತಾಶೆಗೊಂಡು ಕಂಗ್ಗೆಟ್ಟಿದ್ದಾರೆ’ ಎಂದು ಸಚಿವರು ತಿರುಗೇಟು ನೀಡಿದ್ದಾರೆ.
ಆರ್.ಅಶೋಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ₹880 ಕೋಟಿ ಮೌಲ್ಯದ 890 ವಿವಿಧ ಔಷಧಗಳನ್ನು ಖರೀದಿಸುವಂತೆ ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟು 7 ತಿಂಗಳು ಕಳೆದರೂ ಇನ್ನೂ ಖರೀದಿ ಮಾಡಿಲ್ಲವಲ್ಲ ಸ್ವಾಮಿ. ನಿಮ್ಮ ಕೈಯಲ್ಲಿ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಬಡವರ ಜೀವದ ಜೊತೆ ಯಾಕೆ ಚೆಲ್ಲಾಟ ಆಡುತ್ತೀರಿ?’ ಎಂದು ಪ್ರಶ್ನೆ ಮಾಡಿದ್ದರು.
ದಿನೇಶ್ ಗುಂಡೂರಾವ್ ತಿರುಗೇಟು: ಆರ್.ಅಶೋಕ ಪೋಸ್ಟ್ಗೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ‘ಅಧಿಕಾರವಿಲ್ಲದೆ ಹತಾಶೆಗೊಂಡು ಕಂಗ್ಗೆಟ್ಟಿರುವ ಆರ್.ಅಶೋಕ ಅಂಡ್ ಟೀಮ್ ದಿನಕ್ಕೊಂದು ಸುಳ್ಳಿನ ಕಂತೆ ಬಿಚ್ಚಿಡುತ್ತಿದೆ. ಅಂಕಿ-ಅಂಶಗಳ ಅರಿವಿಲ್ಲದೆ, ಜನರ ದಿಕ್ಕು ತಪ್ಪಿಸುವ BJPಯ ಈ ‘ಸುಳ್ಳಿನ ಫ್ಯಾಕ್ಟರಿ’ಗೆ ಕನ್ನಡಿಗರು ಎಂದಿಗೂ ಮರುಳಾಗುವುದಿಲ್ಲ’ ಎಂದು ಹೇಳಿದ್ದಾರೆ.
‘ಪೋಸ್ಟರ್ಗಳ ಮೂಲಕ ಕಲ್ಪನಾಲೋಕ ಸೃಷ್ಟಿಸಿ, ಬಿಜೆಪಿ ಆಡಳಿತಾವಧಿಯ ಹಗರಣಗಳನ್ನು ಮುಚ್ಚಿ ಹಾಕಲು ನಡೆಸುತ್ತಿರುವ ಗಿಮಿಕ್ಗಳು ಸಫಲವಾಗುವುದಿಲ್ಲ. ನಾವು ಮನೆ ಮನೆಗೆ ತೆರಳಿ ಆರೋಗ್ಯ ಭದ್ರತೆ ನೀಡುತ್ತಿದ್ದರೆ, ಬಿಜೆಪಿಯವರು ಸುಳ್ಳುಗಳ ಭದ್ರಕೋಟೆ ಕಟ್ಟುತ್ತಿದ್ದಾರೆ’ ಎಂದು ದೂರಿದ್ದಾರೆ.
‘ಔಷಧಿಗಳಿಲ್ಲದೆ ಆಸ್ಪತ್ರೆಗಳು ನಡೆಯಲು ಸಾಧ್ಯವಿಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಬಿಜೆಪಿ ನಾಯಕರಿಗೆ ‘ಸುಳ್ಳು’ ಹೇಳುವುದೇ ಒಂದು ಚಟವಾಗಿಬಿಟ್ಟಿದೆ. ನಮ್ಮ ಸರ್ಕಾರದ ಕಾರ್ಯವೈಖರಿ ಮತ್ತು ಪಾರದರ್ಶಕತೆ ಕನ್ನಡಿಗರ ಮುಂದಿದೆ. ಈಗಾಗಲೇ 496 ಔಷಧಿಗಳ ಟೆಂಡರ್ ಪ್ರಕ್ರಿಯೆ ಅತ್ಯಂತ ವೇಗವಾಗಿ ಸಾಗುತ್ತಿದೆ ಹಾಗೂ 99 ಔಷಧಿಗಳಿಗೆ ಈಗಾಗಲೇ NOA ನೀಡಲಾಗಿದೆ’ ಎಂದು ವಿವರಿಸಿದ್ದಾರೆ.
‘ತುರ್ತು ಸಂದರ್ಭ ಎದುರಾದರೆ ಎದೆಗುಂದದೆ ಎದುರಿಸಲು ₹30 ಕೋಟಿ ವೆಚ್ಚದಲ್ಲಿ ಜನೌಷಧಿ ಮೂಲಕ ಮಧ್ಯಂತರ ಪೂರೈಕೆಗೂ ನಾವು ಸನ್ನದ್ಧರಾಗಿದ್ದೇವೆ. ನಾಲ್ಕು ವಿಶೇಷ ತಂಡಗಳು ಹಗಲಿರುಳು ಶ್ರಮಿಸುತ್ತಿದ್ದು, ಇಡೀ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಚುರುಕುಗೊಳಿಸಿವೆ. ನಮ್ಮಲ್ಲಿ ದಾಸ್ತಾನು ಲಭ್ಯವಿದೆ, ಪ್ರಕ್ರಿಯೆ ಪಾರದರ್ಶಕವಾಗಿದೆ ಎಂಬುದು ಆರ್.ಅಶೋಕ್ ಸೇರಿದಂತೆ ಸುಳ್ಳಿನ ಫ್ಯಾಕ್ಟರಿಯ ನಾಯಕರಿಗೆ ತಿಳಿದಿರಲಿ’ ಎಂದು ತಿರುಗೇಟು ಕೊಟ್ಟಿದ್ದಾರೆ.
‘ಅಶೋಕ್ ಅವರೇ, ನಿಮಗೆ ಮತ್ತು ನಿಮ್ಮ ಪಕ್ಷದವರಿಗೆ ಯಾವುದಾದರೂ ಖಾಯಿಲೆ ಇದ್ದರೆ ಒಮ್ಮೆ ನಮ್ಮ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಿರಿ. ಆಗ ನಮ್ಮ ಸೇವೆ ಮತ್ತು ಔಷಧಿಗಳ ಲಭ್ಯತೆ ನಿಮ್ಮ ಸುಪ್ತ ಮನಸ್ಸಿಗೆ ಅರಿವಾಗುತ್ತದೆ. ಸುಮ್ಮನೆ ಹವಾನಿಯಂತ್ರಿತ ಕೊಠಡಿಯಲ್ಲಿ ಕೂತು ಟ್ವೀಟ್ ಮಾಡುವ ಬದಲು, ಜನರ ಮಧ್ಯೆ ಬಂದು ಸತ್ಯ ನೋಡಿ. ನಿಮ್ಮ ಹತಾಶೆಗೆ ಸೂಕ್ತ ಚಿಕಿತ್ಸೆ ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಜನರ ಕಣ್ಣಿಗೆ ಮಂಕುಬೂದಿ ಎರಚುವ ನಿಮ್ಮ ವಿಫಲ ಪ್ರಯತ್ನಗಳನ್ನು ಇನ್ನಾದರೂ ನಿಲ್ಲಿಸಿ. ಬೇರೆಯವರ ರಾಜೀನಾಮೆ ಕೇಳುವ ಮುನ್ನ, ನೀವು ಹೇಳಿದ ಸರಣಿ ಸುಳ್ಳುಗಳಿಗೆ ಮೊದಲು ರಾಜ್ಯದ ಜನರ ಕ್ಷಮೆ ಕೇಳಿ. ಸತ್ಯಕ್ಕೆ ಸಾವಿಲ್ಲ, BJP ಸುಳ್ಳಿಗೆ ಉಳಿಗಾಲವಿಲ್ಲ’ ಎಂದು ಹೇಳಿದ್ದಾರೆ.

