ಯಾದಗಿರಿ: ಶಾಲಾ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ನಾಲ್ಕು ವರ್ಷದ ಪುಟ್ಟ ಬಾಲಕ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ್ ಗ್ರಾಮದಲ್ಲಿ ನಡೆದಿದೆ.
ಗಾಜರಕೋಟ್ ಗ್ರಾಮದ ನಿವಾಸಿಯಾದ ಪುನೀತ್ (4) ಮೃತ ದುರ್ದೈವಿ ಬಾಲಕ. ಈತ ಗ್ರಾಮದಲ್ಲಿರುವ ಖಾಸಗಿ ಶಾಲೆಯಲ್ಲಿ ಎಲ್ಕೆಜಿ ಅಥವಾ ಯುಕೆಜಿ ಓದುತ್ತಿದ್ದ ಎಂದು ತಿಳಿದುಬಂದಿದೆ. ಪ್ರತಿನಿತ್ಯದಂತೆ ಇಂದು ಕೂಡ ಶಾಲಾ ಬಸ್ಸಿನಲ್ಲಿ ಬಾಲಕ ಶಾಲೆಗೆ ತೆರಳಿದ್ದ. ಸಂಜೆ ಶಾಲೆ ಮುಗಿದ ನಂತರ ಬಸ್ ವಿದ್ಯಾರ್ಥಿಗಳನ್ನು ಬಿಡಲು ಗ್ರಾಮಕ್ಕೆ ಬಂದಿತ್ತು.
ದುರಂತ ಸಂಭವಿಸಿದ್ದು ಹೇಗೆ? : ಬಾಲಕ ಪುನೀತ್ ಬಸ್ಸಿನಿಂದ ಇಳಿದ ತಕ್ಷಣ, ಚಾಲಕ ಹಿಂದೆ ಯಾರಿದ್ದಾರೆ ಎಂಬುದನ್ನು ಗಮನಿಸದೇ ಏಕಾಏಕಿ ಬಸ್ಸನ್ನು ರಿವರ್ಸ್ ತೆಗೆದಿದ್ದಾನೆ. ಈ ವೇಳೆ ಬಸ್ ಬಾಲಕನ ಮೇಲೆ ಹರಿದಿದ್ದು, ತೀವ್ರವಾಗಿ ಗಾಯಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕುಟುಂಬಸ್ಥರ ಆಕ್ರಂದನ: ತನ್ನ ಕಣ್ಣೆದುರೇ ಮಗ ಸಾವನ್ನಪ್ಪಿದ್ದನ್ನು ಕಂಡ ಪೋಷಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಘಟನಾ ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

