ಮಂಡ್ಯ: ಚಿನ್ನಾಭರಣ ಮಳಿಗೆಯಲ್ಲಿ ಆಸಿಡ್ ದಾಳಿ ನಡೆಸಿ ಚಿನ್ನಾಭರಣ ದೋಚಲಾಗಿದೆ ಎಂದು ಕತೆ ಕಟ್ಟಿದ್ದ ಚಿನ್ನದ ವ್ಯಾಪಾರಿಯನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ಮಹಾಲಕ್ಷ್ಮಿ ಜುವೆಲ್ಲರಿ ಶಾಪ್ ಮಾಲೀಕ ಜಿತೇಂದ್ರ ಸಿಂಗ್ ಬಂಧಿತ ವ್ಯಕ್ತಿ. ಆಸಿಡ್ ದಾಳಿಯಾಗಿದೆ ಎಂದು ಜಿತೇಂದ್ರ ಸಿಂಗ್ ನಾಟಕವಾಡಿದ್ದ. ಚಿನ್ನದ ಅಂಗಡಿ ಮಾಲೀಕನ ಮಾತು ನಂಬಿ ಪೊಲೀಸರು ತನಿಖೆ ನಡೆಸಿದ್ದರು.
170 ಗ್ರಾಂ ಚಿನ್ನ, 8 ಕೆಜಿ ಬೆಳ್ಳಿ ದರೋಡೆಯಾಗಿದೆ ಎಂದು ಜಿತೇಂದ್ರ ಕತೆ ಕಟ್ಟಿದ್ದ. ಗಗನಕ್ಕೇರಿದ ಚಿನ್ನದ ಸಾಲ ವಾಪಸ್ ಕೊಡದಿರಲು ಖತರ್ನಾಕ್ ಪ್ಲಾನ್ ಮಾಡಿಕೊಂಡಿದ್ದ. ಆದರೆ, ಆಸಿಡ್ ದಾಳಿಯ ನಾಟಕವಾಡಿ ಜಿತೇಂದ್ರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಸಾಲಗಾರರು ಮತ್ತು ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು ಡ್ರಾಮಾ ಮಾಡಿದ್ದಾನೆ. ಚಿನ್ನಕ್ಕೆ ಬಳಸುವ ರಾಸಾಯನಿಕವನ್ನು ಮುಖಕ್ಕೆ ಬಳಿದುಕೊಂಡಿದ್ದ. ದುಷ್ಕರ್ಮಿಗಳು ಆಸಿಡ್ ಎರಚಿ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾಗಿ ಹೇಳಿಕೆ ನೀಡಿದ್ದ.
ಸಿಸಿಟಿವಿ ಡಿವಿಆರ್ ಸಮೇತ ಚಿನ್ನ, ಬೆಳ್ಳಿ ಕಳವಾಗಿದೆ ಎಂದು ದೂರು ನೀಡಿದ್ದ. ಆದರೆ ಕಣ್ಣಿಗೆ ತಾಗದಂತೆ ಮುಖದ ಮೇಲಷ್ಟೇ ಸುಟ್ಟ ಕಲೆ ಕಂಡುಬಂದ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತವಾಗಿತ್ತು. ಜಿತೇಂದ್ರ ಸಿಂಗ್ ನನ್ನು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬಯಲಾಗಿದೆ. ರಾಜಸ್ಥಾನದಿಂದ ಬಂದು ಹಲವು ವರ್ಷಗಳಿಂದ ಚಿನ್ನದ ವ್ಯಾಪಾರ ಮಾಡಿಕೊಂಡಿದ್ದ ಜಿತೇಂದ್ರ ಸಿಂಗ್ ಕ್ಯಾತನಹಳ್ಳಿಯಲ್ಲಿ ಜುವೆಲ್ಲರಿ ಶಾಪ್ ಇಟ್ಟುಕೊಂಡಿದ್ದ. ಚಿನ್ನಾಭರಣಕ್ಕೆ ಬಳಸುವ ರಾಸಾಯನಿಕ ಮುಖಕ್ಕೆ ಬಳಿದುಕೊಂಡು ನಾಟಕವಾಡಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದ್ದು, ಆತನನ್ನು ಬಂಧಿಸಲಾಗಿದೆ

