ಇಂದು ( ಫೆಬ್ರವರಿ 17 ) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 31ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಕೆನಡಾ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಕೆನಡಾ ಮೊದಲು ಬ್ಯಾಟಿಂಗ್ ಆರಿಸಿಕೊಂಡು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿ ನ್ಯೂಜಿಲೆಂಡ್ಗೆ 174 ರನ್ಗಳ ಸವಾಲಿನ ಗುರಿಯನ್ನು ನೀಡಿದೆ.
ಕೆನಡಾದ ಆಟಗಾರರು ಸಾಧಾರಣ ಆಟವನ್ನಾಡಿದರೆ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಆರಂಭಿಕ ಆಟಗಾರ ಯುವರಾಜ್ ಸಾಮ್ರಾ ನಂತರ ಸಿಡಿದೆದ್ದು, ಬೌಂಡರಿ ಹಾಗೂ ಸಿಕ್ಸರ್ಗಳ ಸುರಿಮಳೆಗೈದು ಶತಕ ಬಾರಿಸಿ ಐಸಿಸಿ ಟೂರ್ನಿಗಳಲ್ಲಿ ಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. 19 ವರ್ಷದ ಯುವರಾಜ್ ಸಾಮ್ರಾ 2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 20 ವರ್ಷದ ಐರ್ಲೆಂಡ್ನ ಪೌಲ್ ಸ್ಟರ್ಲಿಂಗ್ ಶತಕ ಬಾರಿಸಿ ಮಾಡಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ.
58 ಎಸೆತಗಳಲ್ಲಿ ಶತಕ ಪೂರೈಸಿದ ಯುವರಾಜ್ ಸಾಮ್ರಾ ಒಟ್ಟು 65 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 110 ರನ್ ಬಾರಿಸಿ ಅಬ್ಬರಿಸಿದರು. ಐಸಿಸಿ ಟೂರ್ನಿಗಳಲ್ಲಿ ಶತಕ ಬಾರಿಸಿದ ಕಿರಿಯ ಆಟಗಾರ ಎಂಬ ದಾಖಲೆ ಮಾತ್ರವಲ್ಲದೇ ಟಿ ಟ್ವೆಂಟಿ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ಸಹ ಯುವರಾಜ್ ಸಾಮ್ರಾ ಬರೆದಿದ್ದಾರೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಶ್ರೀಲಂಕಾದ ಪತುಮ್ ನಿಸ್ಸಂಕ ಬಳಿಕ ಶತಕ ಬಾರಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

