ಕೆಎಸ್ಆರ್‌ಟಿಸಿ ಫೆಬ್ರವರಿ 16ರಿಂದಲೇ ಜಾರಿಗೆ ಬರುವಂತೆ ಲಗೇಜ್ ದರವನ್ನು ಏರಿಕೆ ಮಾಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಹೊರತಾಗಿ ಪ್ರಯಾಣಿಕ ಸಹಿತ ಹಾಗೂ ಪ್ರಯಾಣಿಕ ರಹಿತ ಲಗೇಜ್‌ಗಳನ್ನು ಸಾಗಿಸಲು ಅವಕಾಶವಿದ್ದು, ಸದರಿ ಲಗೇಜ್‌ಗಳಿಗೆ ವಿಧಿಸಬೇಕಾದ ಟಿಕೆಟ್ ದರಗಳು, ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿರುತ್ತದೆ.
ಡೀಸೆಲ್, ಸಿಬ್ಬಂದಿ ಹಾಗೂ ಇತರೆ ವೆಚ್ಚಗಳ ಹೆಚ್ಚಳದ ಹಿನ್ನೆಲೆಯಲ್ಲಿ ನಿಗಮದ ಬಸ್ಸುಗಳಲ್ಲಿ ಸಾಗಿಸುವ ಲಗೇಜ್ ದರಗಳನ್ನು ಪರಿಷ್ಕರಿಸಲಾಗಿದೆ. ಪರಿಷ್ಕೃತ ದರಗಳು ದಿನಾಂಕ 16-02-2026ರಿಂದ ಜಾರಿಗೆ ಬರಲಿದೆ. ಪರಿಷ್ಕೃತ ದರಗಳನ್ನು ಇಟಿಎಂ ತಂತ್ರಾಂಶದಲ್ಲಿ ಅಳವಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಿ.ವೈ.ವಿಜಯೇಂದ್ರ ಗರಂ: ಕೆಎಸ್ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ ಆದೇಶಕ್ಕೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗರಂ ಆಗಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
‘ಒಂದು ಕೈಯಿಂದ ಕೊಟ್ಟಂತೆ ಮಾಡಿ ಎರಡೂ ಕೈಯಿಂದ ಕಿತ್ತುಕೊಳ್ಳುವುದು ಕಾಂಗ್ರೆಸ್ ಗ್ಯಾರಂಟಿ ಫಾರ್ಮುಲಾ. ಒಂದೆಡೆ ಹೆಣ್ಣು ಮಕ್ಕಳಿಗೆ ‘ಉಚಿತ’ ಎಂದು ಬಸ್ ಹತ್ತಿಸಿ, ಇನ್ನೊಂದೆಡೆ, ಟಿಕೆಟ್ ದರ ಏರಿಕೆ, ನಂತರ ಈಗ ಲಗೇಜ್ ಮೇಲೆ 15% ದರ ಏರಿಸಿ, ಜನರನ್ನು ಮತ್ತಷ್ಟು ಲೂಟಿ ಮಾಡಲು ಮುಂದಾಗಿದೆ ಈ ಕಾಂಗ್ರೆಸ್ ಸರ್ಕಾರ!’ ಎಂದು ಟೀಕಿಸಿದ್ದಾರೆ.
‘ಈಗ ಜಾರಿಗೆ ಬಂದಿರುವ KSRTC ಲಗೇಜ್ ದರ ಏರಿಕೆ ಕೇವಲ ದರವಲ್ಲ, ಇದು ಈ ಕಾಂಗ್ರೆಸ್ ಸರ್ಕಾರ, ಸಣ್ಣ ವ್ಯಾಪಾರಿಗಳು ಮತ್ತು ರೈತರ ಬೆನ್ನಿಗೆ ದಾಟಿಸಿದ ತನ್ನ ಹೊರೆ. ಉಚಿತ ಭಾಗ್ಯದ ಹೆಸರಲ್ಲಿ ಖಜಾನೆ ಖಾಲಿ ಮಾಡಿ, ಈಗ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿರುವುದೇ ನಿಮ್ಮ ಜನಪರ ಆಡಳಿತವೇ ಮಾನ್ಯ ಮುಖ್ಯಮಂತ್ರಿಗಳೇ? ತನ್ನ ‘ಗ್ಯಾರಂಟಿ’ಗಳ ಹೊರೆ ಹೊರಲು ತನ್ನಿಂದ ಆಗುತ್ತಿಲ್ಲ ಎನ್ನುವುದನ್ನು ಸಾಬೀತು ಮಾಡಲು ಈಗ ಲಗೇಜ್ ದರವನ್ನು ಹೆಚ್ಚಿಸಿದೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ’ ಎಂದು ಆರೋಪಿಸಿದ್ದಾರೆ.
‘ಸಾರಿಗೆ ಸಂಸ್ಥೆಯನ್ನು ನಷ್ಟಕ್ಕೆ ದೂಡಿ, ಸದ್ದಿಲ್ಲದೆ ದರ ಏರಿಸುವ ಮೂಲಕ ಸರ್ಕಾರವೇ ಜನಸಾಮಾನ್ಯರ ಲೂಟಿಗೆ ಇಳಿದಿದೆ. ಜನರಿಗೆ ಅನುಕೂಲ ಕಲ್ಪಿಸುವುದಿರಲಿ, ಹೆಚ್ಚಿನ ಅನಾನುಕೂಲ ಕಲ್ಪಿಸಿ, ಅದಕ್ಕೂ ಜನರೇ ಹೆಚ್ಚಿನ ತೆರಿಗೆ ಕಟ್ಟಬೇಕು ಎನ್ನುವ ತುಘಲಕ್ ಸೂತ್ರಗಳನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು. ಜನರ ಲಗೇಜ್ ಮೇಲೂ ಅಧಿಕ ಕಪ್ಪ ವಸೂಲಿಗೆ ಇಳಿದಿರುವ ಈ ಲೂಟಿ ಸರ್ಕಾರಕ್ಕೆ ರಾಜ್ಯದ ಜನರೇ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ’ ಎಂದು ಹೇಳಿದ್ದಾರೆ.

