ವೈಟ್ ಬೋರ್ಡ್, ಖಾಸಗಿ ವಾಹನಗಳಲ್ಲಿ ಬಾಡಿಗೆ ಮಾಡುವವರ ಗಮನಕ್ಕೆ ಪ್ರಮುಖವಾದ ಮಾಹಿತಿಯೊಂದಿದೆ. ಖಾಸಗಿ ವಾಹನ ಮಾಲೀಕರು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಬಾಡಿಗೆ ಮಾಡಿದರೆ ಲೈಸೆನ್ಸ್ ರದ್ದುಗೊಳಿಲಾಗುತ್ತದೆ.
ಈ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಸೂಚನೆ ನೀಡಿದ್ದಾರೆ. ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ, ಖಾಸಗಿ ವಾಹನಗಳಲ್ಲಿ ಬಾಡಿಗೆ ಮಾಡುವ ವಾಹನಗಳ ಲೈಸೆನ್ಸ್‌ಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಖಾಸಗಿ ವಾಹನಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿರುವ ಕುರಿತಂತೆ ಟ್ಯಾಕ್ಸಿ ಚಾಲಕರು ನೀಡಿದ ದೂರಿನ ಕುರಿತಂತೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಇಂತಹ ವಾಹನಗಳ ಕುರಿತು ಟ್ಯಾಕ್ಸಿ ಚಾಲಕರು ಫೋಟೋ ಸಹಿತ ದೂರು ನೀಡಿದ್ದು, ಈ ಕುರಿತು ಪರಿಶೀಲಿಸಿ, ನಿಯಮಾನುಸಾರ ದಂಡ ವಿಧಿಸಿ ಎಂದರು.
ಪದೇ-ಪದೇ ಇದನ್ನು ಪುನಾರಾವರ್ತನೆ ಮಾಡುತ್ತಿರುವ ವಾಹನಗಳ ಲೈಸೆನ್ಸ್‌ಗಳನ್ನು ರದ್ದುಗೊಳಿಸುವಂತೆ ಹಾಗೂ ಜಿಲ್ಲೆಯಲ್ಲಿ ಅನಧಿಕೃತವಾಗಿ ಸಂಚರಿಸುತ್ತಿರುವ ಟ್ಯಾಕ್ಸಿ, ಆಟೋ ಮತ್ತು ಬಾಡಿಗೆ ಬೈಕ್‌ಗಳ ಕುರಿತಂತೆ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಟೋ ನಿಲ್ದಾಣ: ಉತ್ತರ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ನಿಲ್ದಾಣ ಮತ್ತು ಟ್ಯಾಕ್ಸಿಗಳ ನಿಲ್ದಾಣದ ಕುರಿತಂತೆ ಹಾಗೂ ರಿಕ್ಷಾಗಳ ಸಂಚಾರ ವ್ಯಾಪ್ತಿ ವಿಸ್ತರಣೆಯ ಕುರಿತಂತೆ ಸಂಬಂಧಪಟ್ಟ ತಾಲೂಕುಗಳ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ತಹಶೀಲ್ದಾರ್‌ಗಳು, ಪೊಲೀಸ್ ಅಧಿಕಾರಿಗಳು ಹಾಗೂ ಆಟೋ ಮತ್ತು ಟ್ಯಾಕ್ಷಿ ಸಂಘಟನೆಗಳು ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಂಡು ಕಳುಹಿಸಬೇಕು.
ಈ ಬಗ್ಗೆ ಅಗತ್ಯ ನಿರ್ಣಯ ಕೈಗೊಳ್ಳಲಾಗುವುದು. ಜಿಲ್ಲಾಡಳಿತ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲಿದ್ದು, ಎರಡೂ ಸಂಘಟನೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಗೋವಾದಲ್ಲಿ ಜಿಲ್ಲೆಯ ವಾಹನಗಳ ವಾಯು ಮಾಲಿನ್ಯ ತಪಾಸಣಾ ಪತ್ರಕ್ಕೆ ಮಾನ್ಯತೆ ನೀಡದ ಬಗ್ಗೆ ಗೋವಾದ ಜಿಲ್ಲಾಧಿಕಾರಿಗಳು ಮತ್ತು ಎಸ್.ಪಿ ಗಳೊಂದಿಗೆ ಚರ್ಚಿಸಲಾಗುವುದು. ವಾಯು ಮಾಲಿನ್ಯ ತಪಾಸಣಾ ಪತ್ರವನ್ನು ಆನ್‌ಲೈನ್‌ನಲ್ಲಿ ದಾಖಲಿಸುವ ಕುರಿತಂತೆ ರಾಜ್ಯದ ಸಾರಿಗೆ ಆಯುಕ್ತಾಲಯದ ಗಮನಕ್ಕೆ ತರಲಾಗುವುದು, ಟ್ಯಾಕ್ಸಿಗಳಲ್ಲಿ ಅಳವಡಿಸಲಾಗುತ್ತಿರುವ ಪ್ಯಾನಿಕ್ ಬಟನ್ ಕಾರ್ಯನಿರ್ವಹಣೆ ಮತ್ತು ಇದಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಆಟೋ ಮತ್ತು ಟ್ಯಾಕ್ಸಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಚಾಲಕರು, ಹೊಸದಾಗಿ ಆಟೋಗಳಿಗೆ ಪರ್ಮಿಟ್ ನೀಡುವುದನ್ನು ಕನಿಷ್ಠ 5 ವರ್ಷಗಳ ತನಕ ಸ್ಥಗಿತಗೊಳಿಸಬೇಕು, ಎಲ್.ಪಿ.ಜಿ ಮತ್ತು ಸಿ.ಎನ್.ಜಿ ವಾಹನಗಳಿಗೆ ವಾಯುಮಾಲಿನ್ಯ ಪ್ರಮಾಣ ಪತ್ರದ ಅವಶ್ಯಕತೆ ಬಗ್ಗೆ, ಪರ್ಮಿಟ್ ವ್ಯಾಪ್ತಿ ಉಲ್ಲಂಘಿಸಿ ವಾಹನ ಚಲಾಯಿಸುತ್ತಿರುವ ಬಗ್ಗೆ, ಬಾಡಿಗೆ ಬೈಕ್ ನಿಷೇಧಿಸುವುದು ಸೇರಿದಂತೆ ತಮ್ಮ ವಿವಿಧ ಸಮಸ್ಯೆಗಳ ಬಗ್ಗೆ ತಿಳಿಸಿದರು.

