ವಿರೋಧ ಪಕ್ಷಗಳು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿವೆ. ಈ ಕುರಿತು ಚರ್ಚೆ ಮತ್ತು ಮತದಾನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಸ್ಪೀಕರ್ ಪದಚ್ಯುತಿಗೊಳ್ಳಲಿದ್ದಾರೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಈ ಕುರಿತು ಮಾಹಿತಿ ನೀಡಿದ್ದಾರೆ. ಲೋಕಸಭೆ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಮಾರ್ಚ್ 9 ರಂದು ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.
ಲೋಕಸಭೆ ಬಜೆಟ್ ಅಧಿವೇಶನದ ಮೊದಲ ಹಂತ ಫೆ. 13ರಂದು ಮುಕ್ತಾಯಗೊಂಡಿದೆ. ಮಾರ್ಚ್ 9ರಂದು 2ನೇ ಹಂತ ಆರಂಭವಾಗಲಿದ್ದು, ಮೊದಲ ದಿನವೇ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಚರ್ಚೆ ನಡೆಯಲಿದೆ.
ಲೋಕಸಭೆ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯಾದ ಮೇಲೆ 14 ದಿನಗಳ ಬಳಿಕ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಆದ್ದರಿಂದ ಮಾರ್ಚ್ 9ರ ದಿನಾಂಕ ನಿಗದಿ ಮಾಡಲಾಗಿದೆ. ಅವಿಶ್ವಾಸ ನಿರ್ಣಯದ ಚರ್ಚೆ ಮುಗಿಯುವ ತನಕ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಮಾರ್ಚ್ 9ರಂದು ಲೋಕಸಭೆ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ನಡೆಯುವಾಗ ಸ್ಪೀಕರ್ ಓಂ ಬಿರ್ಲಾ ಕಲಾಪ ನಡೆಸುವಂತಿಲ್ಲ. ಉಪ ಸ್ಪೀಕರ್ ಅಥವ ರಾಷ್ಟ್ರಪತಿಗಳು ನೇಮಕ ಮಾಡಿದ ವ್ಯಕ್ತಿ ಕಲಾಪ ನಡೆಸಬೇಕು.
ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗಳು ನಡೆದು ಮತದಾನ ಮಾಡಲಾಗುತ್ತದೆ. ಲೋಕಸಭೆ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯ ಲೋಕಸಭೆಯಲ್ಲಿ ಅಂಗೀಕಾರವಾಗಬೇಕಾದರೆ 272 ಮತಗಳು ಅಗತ್ಯವಿದೆ. ನಿರ್ಣಯ ಅನುಮೋದನೆಯಾದರೆ ಸ್ಪೀಕರ್ ಪದಚ್ಯುತಿಗೊಳ್ಳಲಿದ್ದು, ಹೊಸ ಸ್ಪೀಕರ್ ಆಯ್ಕೆ ನಡೆಯಬೇಕಿದೆ.
ಭಾರತದ ಇತಿಹಾಸದಲ್ಲಿ ಮೂರು ಬಾರಿ ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಆದರೆ ಎಂದೂ ಸಹ ಸ್ಪೀಕರ್ ಪದಚ್ಯುತಿಯಾಗಿಲ್ಲ. ಈಗ ಕಾಂಗ್ರೆಸ್ ಮಂಡಿಸಿರುವ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ವಿಚಾರದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿಯೇ ಒಮ್ಮತವಿಲ್ಲ.
ಆದ್ದರಿಂದ ಯಾವ ಯಾವ ಪಕ್ಷಗಳು ಚರ್ಚೆಯಲ್ಲಿ ಪಾಲ್ಗೊಳ್ಳಲಿವೆ. ಯಾವ ಯಾವ ಪಕ್ಷದ ನಾಯಕರು ಕಲಾಪಕ್ಕೆ ಗೈರಾಗಲಿದ್ದಾರೆ. ಯಾರು ಮತದಾನದಿಂದ ದೂರವಿರಲಿದ್ದಾರೆ? ಎಂಬುದು ಕುತೂಹಲ ಮೂಡಿಸಿದೆ.
ಟಿಎಂಸಿ ಪಕ್ಷ ಅಧಿಕೃತವಾಗಿ ಲೋಕಸಭೆ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದೆ. ಅವಿಶ್ವಾಸ ನಿರ್ಣಯದ ನೋಟಿಸ್‌ಗೆ ಸಹ ಟಿಎಂಸಿ ಸಂಸದರು ಸಹಿ ಮಾಡಿಲ್ಲ.

