ನವದೆಹಲಿ: ಕಾಯ್ದಿರಿಸುವ ಟಿಕೆಟ್ ವಿಧಾನದಲ್ಲಿ ಭಾರತೀಯ ರೈಲ್ವೆ ಕಠಿಣ ನಿಯಮ ಪರಿಚಯಿಸಿದೆ. ಇನ್ನು ಮುಂದೆ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ತಮಗೆ ನಿಗದಿಯಾದ ನಿಲ್ದಾಣದಲ್ಲಿ ರೈಲು ಹತ್ತದಿದ್ದರೆ ಟಿಕೆಟ್ ರದ್ದಾಗಲಿದೆ.
ರೈಲ್ವೆ ಟಿಕೆಟ್ ಪರೀಕ್ಷಕರಿಗೆ ಹೊಸ HHT ಟ್ಯಾಬ್ಲೆಟ್ ನೀಡಿದೆ. ಒಂದು ವೇಳೆ ಕಾಯ್ದಿರಿಸಿದ ಪ್ರಯಾಣಿಕರು ನಿಗದಿತ ನಿಲ್ದಾಣದಲ್ಲಿ ರೈಲು ಹತ್ತದಿದ್ದರೆ ಅದು ತಕ್ಷಣ HHT ಟ್ಯಾಬ್ಲೆಟ್ ಗಳಲ್ಲಿ ದಾಖಲಾಗುತ್ತದೆ. ನಂತರ ಕಾಯುವಿಕೆ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ದಾಖಲಾದ ಸೀಟು ನೀಡಲಾಗುವುದು. ಸೀಟು ಬೇರೊಬ್ಬರಿಗೆ ನೀಡಿದ ಬಗ್ಗೆ ಮೂಲ ಪ್ರಯಾಣಿಕರಿಗೆ ಸಂದೇಶ ರವಾನೆ ಆಗುತ್ತದೆ.
ಇದಕ್ಕೂ ಮೊದಲು ನಿಗದಿತ ನಿಲ್ದಾಣಗಳಲ್ಲಿ ಕಾಯ್ದಿರಿಸಿದ ಪ್ರಯಾಣಿಕರು ರೈಲು ಹತ್ತದಿದ್ದರೆ ಸೀಟನ್ನು ಮುಂದಿನ ಎರಡು ನಿಲ್ದಾಣಗಳವರೆಗೆ ಖಾಲಿ ಬಿಡುತ್ತಿದ್ದರು. ಈಗ ಬುಕ್ ಮಾಡಿದ ಸ್ಥಳದಲ್ಲಿ ರೈಲು ಹತ್ತದಿದ್ದರೆ ಟಿಕೆಟ್ ರದ್ದಾಗಲಿದೆ.

