ಮಂಡ್ಯ: ಕೆಮಿಕಲ್ ಟ್ಯಾಂಕ್ ಸ್ಪೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಬಸರಾಳು ಸಮೀಪದ ಕಾರೆಕಟ್ಟೆ ಬಳಿ ಕೀರ್ತಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ನಡೆದಿದೆ.
ಕಾರೆಕಟ್ಟೆಯಿಂದ ಬೇರೆ ಕಡೆಗೆ ಕಾರ್ಖಾನೆ ಶಿಫ್ಟ್ ಮಾಡಲಾಗುತ್ತಿತ್ತು. ಬಿಹಾರ ಮೂಲದ ಕಾರ್ಮಿಕರಿಂದ ಕಾರ್ಖಾನೆ ಸ್ಥಳಾಂತರ ಕಾರ್ಯ ನಡೆದಿತ್ತು. ಕಳೆದ ಒಂದು ತಿಂಗಳಿನಿಂದಲೂ ಸ್ಥಳಾಂತರ ಕೆಲಸ ನಡೆದಿದ್ದು, ಇಂದು ರಾಸಾಯನಿಕ ಟ್ಯಾಂಕ್ ತೆರವು ಮಾಡುತ್ತಿದ್ದ ವೇಳೆ ಸ್ಪೋಟಗೊಂಡು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇದೇ ಕಾರ್ಖಾನೆಯಲ್ಲಿ ನಾಲ್ಕು ವರ್ಷಗಳ ಹಿಂದೆಯೂ ಅವಘಡ ನಡೆದಿತ್ತು. ರಾಸಾಯನಿಕ ಸೋರಿಕೆಯಿಂದಾಗಿ ನೂರಾರು ಎಕರೆ ಬೆಳೆ ನಾಶವಾಗಿತ್ತು. ರಾಸಾಯನಿಕ ಸೋರಿಕೆ ಉಂಟಾಗಿ ಎರಡು ನಾಯಿಗಳು ಮೃತಪಟ್ಟಿದ್ದವು. ನಂತರ ಕಾರ್ಖಾನೆ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾನಿಯಾದ ಬೆಳೆಗೆ ಮಂಡ್ಯ ಜಿಲ್ಲಾಡಳಿತ ಪರಿಹಾರ ದೊರಕಿಸಿಕೊಟ್ಟಿತ್ತು. ಹೀಗಾಗಿ ಸದ್ಯ ಬೇರೆ ಕಾರ್ಖಾನೆ ಸ್ಥಳಾಂತರ ಮಾಡಿಸುತ್ತಿದ್ದ ಮಾಲೀಕ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೆ ಇದ್ದ ಕಾರಣ ಮತ್ತೆ ದುರಂತ ಸಂಭವಿಸಿದೆ. ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

