ಶಿವಮೊಗ್ಗ: ವಾಹನ ಬಾಡಿಗೆ ಹಣ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಅವರ ಪರವಾಗಿ ಹಣ ಪಡೆಯುತ್ತಿದ್ದ ಗ್ರಾಮ ಸಹಾಯಕನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾದಿನಾಧಿಕಾರಿ ಸಿದ್ಧಲಿಂಗ ರೆಡ್ಡಿ, ಹೊಳಲೂರು ನಾಡಕಚೇರಿ ಗ್ರಾಮ ಸಹಾಯಕ ರಾಜೇಶ್ ಬಂಧಿತರು. ಓತಿಘಟ್ಟ ಗ್ರಾಮದ ನಿವಾಸಿ ವಿ. ಕೇಶವಮೂರ್ತಿ ತಮ್ಮ ಕಾರ್ ಅನ್ನು ಕಳೆದ ಎರಡು ವರ್ಷದಿಂದ ಶಿವಮೊಗ್ಗದ ಎನ್.ಹೆಚ್. 206ರ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಬಾಡಿಗೆ ನೀಡಿದ್ದರು.
ನವೆಂಬರ್ 2025 ರ ಮಾಸಿಕ ಬಾಡಿಗೆ ಹಣ ಬಿಡುಗಡೆ ಮಾಡಲು ವಿಶೇಷ ಭೂಸ್ವಾಧೀನಾಧಿಕಾರಿ ಸಿದ್ಧಲಿಂಗ ರೆಡ್ಡಿ 40,000 ರೂ. ಲಂಚಕ್ಕೆ ಬೇಟಿಕೆ ಇಟ್ಟಿದ್ದರು. ಕೇಶವಮೂರ್ತಿ ನೀಡಿದ ದೂರಿನ ಆಧಾರದ ಮೇಲೆ ಶಿವಮೊಗ್ಗದ ನೆಹರು ಕ್ರೀಡಾಂಗಣದ ಬಳಿ ಸಿದ್ದಲಿಂಗ ರೆಡ್ಡಿ ಸೂಚನೆ ಮೇರೆಗೆ ಹಣ 40,000 ರೂ. ಹಣ ಪಡೆಯುವಾಗ ಹೊಳಲೂರು ನಾಡಕಚೇರಿ ಗ್ರಾಮ ಸಹಾಯಕ ರಾಜೇಶ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್, ಲೋಕಾಯುಕ್ತ ನಿರೀಕ್ಷಕರಾದ ಕೆ.ಪಿ. ರುದ್ರೇಶ್, ಗುರುರಾಜ್ ಮೈಲಾರ್, ವೀರಬಸಪ್ಪ ಎಲ್. ಕುಸಲಾಪುರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

