ನವದೆಹಲಿ: ಬಳ್ಳಾರಿ -ಹೊಸಪೇಟೆ ನಡುವೆ ಮೂರು ಮತ್ತು ನಾಲ್ಕನೇ ಮಾರ್ಗಗಳ ನಿರ್ಮಾಣ ಸೇರಿದಂತೆ ಒಟ್ಟು ನಾಲ್ಕು ರೈಲ್ವೆ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಸಭೆ ಶನಿವಾರ ಅನುಮೋದನೆ ನೀಡಿದೆ.
ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಹರಿಯಾಣ ರಾಜ್ಯಗಳಲ್ಲಿ ಒಟ್ಟು 2372 ಕೋಟಿ ರೂ. ವೆಚ್ಚದಲ್ಲಿ ಈ ಮಾರ್ಗಗಳ ನಿರ್ಮಾಣ ಮಾಡಲಾಗುವುದು.
ಹೊಸಪೇಟೆ- ಬಳ್ಳಾರಿ ನಡುವೆ ಈಗಾಗಲೇ ಜೋಡಿಹಳಿ ಮಾರ್ಗ ಇದೆ. ಮೂರನೇ ಮತ್ತು ನಾಲ್ಕನೇ ಹಳಿ ನಿರ್ಮಾಣದಿಂದ ರಾಜ್ಯದ ಉಕ್ಕು ಮತ್ತು ಗಣಿಗಾರಿಕೆ ಕೇಂದ್ರವಾದ ಬಳ್ಳಾರಿ ಭಾಗದಲ್ಲಿ ಸಂಚಾರದಟ್ಟಣೆ ನಿವಾರಿಸಿ ಸರಕು ಸಾಗಣೆ ಸುಗಮವಾಗಲಿದೆ. ಈ ಯೋಜನೆಯಿಂದ ಹೊಸಪೇಟೆಯಿಂದ ಹಂಪಿ, ಬಳ್ಳಾರಿ ಕೋಟೆ, ದರೋಜಿ ಕರಡಿ ಧಾಮ ಅಭಯಾರಣ್ಯ, ತುಂಗಭದ್ರಾ ಡ್ಯಾಂ, ಕೆಂಚನಗುಡ್ಡ, ವಿಜಯ ವಿಠ್ಠಲ ದೇವಾಲಯ ಮೊದಲಾದ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕ ಸುಧಾರಿಸುತ್ತದೆ.
ಇದರಿಂದ ವಾರ್ಷಿಕ ಸುಮಾರು 323 ಕೋಟಿ ರೂಪಾಯಿ ಸರಕು ಸಾಗಣೆ ವೆಚ್ಚ ಉಳಿತಾಯವಾಗುತ್ತದೆ. ನಾಲ್ಕು ಪಧದ ಹಳಿ ನಿರ್ಮಾಣದಿಂದ ಆಂಧ್ರವನ್ನು ಕರ್ನಾಟಕ, ಗೋವಾಕ್ಕೆ ಸಂಪರ್ಕಿಸುವುದು ಸುಲಭವಾಗುತ್ತದೆ. ಒಟ್ಟು 65 ಕಿ.ಮೀ. ಉದ್ದದ ಈ ರೈಲು ಮಾರ್ಗದಲ್ಲಿ 34 ಪ್ರಮುಖ ಸೇತುವೆ, 220 ಸಣ್ಣ ಸೇತುವೆ ನಿರ್ಮಿಸಲಾಗುವುದು. 11 ರಸ್ತೆ ಓವರ್ ಬ್ರಿಡ್ಜ್ ಗಳು, 14 ರಸ್ತೆ ಅಂಡರ್ ಬ್ರಿಡ್ಜ್ ಗಳ ನಿರ್ಮಾಣದ ಉದ್ದೇಶವಿದ್ದು, ಒಟ್ಟು ರೈಲ್ವೆ ಹಳಿಯ ಉದ್ದ 149 ಕಿಲೋಮೀಟರ್ ಅಗಲಿದೆ ಎಂದು ಹೇಳಲಾಗಿದೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಾಲ್ಕು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

