ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚ್ರೆಗೆ 20 ಕೆ.ಎ.ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿತ್ತು. ಬಡ್ತಿ ಪಟ್ಟಿಯಲ್ಲಿ ಸ್ವಯಂ ನಿವೃತ್ತಿಪಡೆದಿರುವ ಹೆಚ್.ಎಲ್.ನಾಗರಾಜ್ ಅವರ ಹೆಸರೂ ಇದ್ದು ಪ್ರಸ್ತುತ ನಿಶ್ಚಲಾನಂದ ಸ್ವಾಮೀಜಿಯಾಗಿರುವ ನಾಗರಾಜ್ ಅವರಿಗೆ ಬಡ್ತಿ ಪಟ್ಟಿಯಲ್ಲಿ ಹೆಸರಿರುವುದು ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.
ಇದೇ ವಿಚಾರವಾಗಿ ಸರ್ಕಾರದ ವಿರುದ್ಧ ಕಿಡಿಕಾರಿರುವ ವಿಪಕ್ಷ ನಾಯಕ ಆರ್.ಅಶೋಕ್ ಸಾವಿರ ಎಡವಟ್ಟುಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿವೃತ್ತ ಅಧಿಕಾರಿಗೂ ಸಿಗ್ತು ಸರ್ವಿಸ್ ಬಡ್ತಿ!
ರಾಜ್ಯ ಸರ್ಕಾರ ಇತ್ತೀಚೆಗೆ 20 ಕೆಎಎಸ್ (KAS) ಅಧಿಕಾರಿಗಳಿಗೆ ಬಡ್ತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಪಟ್ಟಿಯಲ್ಲಿ ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದೆ. ಆದರೆ, ಅಚ್ಚರಿಯ ವಿಷಯವೆಂದರೆ ಈ ಪಟ್ಟಿಯಲ್ಲಿ ಈಗಾಗಲೇ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿರುವ ಹೆಚ್.ಎಲ್. ನಾಗರಾಜ (ಪ್ರಸ್ತುತ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ) ಅವರ ಹೆಸರೂ ಸೇರಿದೆ ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಕಾಂಗ್ರೆಸ್ ಸರ್ಕಾರದ ಅದಕ್ಷತೆ, ಅಸಮರ್ಥತೆ ಈಗ ಯಾವ ಮಟ್ಟಕ್ಕೆ ತಲುಪಿದೆ ಗೊತ್ತಾ? ಸೇವೆಯಿಂದ ಸ್ವಯಂನಿವೃತ್ತರಾಗಿ ಕಾವಿ ಧರಿಸಿ ಪೀಠಾಧಿಪತಿಯಾಗಿರುವವರಿಗೂ “ಬಡ್ತಿ ಭಾಗ್ಯ” ನೀಡುವ ಮಟ್ಟಕ್ಕೆ!
ಒಬ್ಬ ಅಧಿಕಾರಿ ಸೇವೆಯಿಂದ ನಿವೃತ್ತರಾಗಿ, ಸಂನ್ಯಾಸ ಸ್ವೀಕರಿಸಿ, ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದರೂ, ನಿಮ್ಮ ಸರ್ಕಾರದ ದಾಖಲೆಗಳಲ್ಲಿ ಅವರು ಇನ್ನೂ “ಸೇವೆಯಲ್ಲಿರುವ ಅಧಿಕಾರಿ”! ನಿಮ್ಮ ಘನಂದಾರಿ ಆಡಳಿತದಲ್ಲಿ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು ಸಹಿ ಮಾಡುವ ಮುನ್ನ ಫೈಲುಗಳನ್ನು ಓದುತ್ತಾರೋ ಕಣ್ಣು ಮುಚ್ಚಿಕೊಂಡು ಸಹಿ ಹಾಕುತ್ತಾರೋ? ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾವ ಅಧಿಕಾರಿಗಳು ಸೇವೆಯಲ್ಲಿ ಇದ್ದಾರೆ, ಯಾರು ನಿವೃತ್ತರಾಗಿದ್ದಾರೆ ಅನ್ನುವ ಕನಿಷ್ಠ ಮಾಹಿತಿಯೂ ಗೊತ್ತಿಲ್ಲದಿದ್ದರೆ, ರಾಜ್ಯದ ಜನತೆ ಆಡಳಿತ ಮತ್ತು ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಸರ್ಕಾರದ ಮೇಲೆ ಹೇಗೆ ವಿಶ್ವಾಸ ಇಡಬೇಕು ಸ್ವಾಮಿ?
ಇವತ್ತು ನಿವೃತ್ತರಾಗಿರುವ ಅಧಿಕಾರಿಯೊಬ್ಬರಿಗೆ ಬಡ್ತಿ ನೀಡಿದ್ದೀರಿ, ನಾಳೆ ನಿಧನ ಹೊಂದಿರುವ ಅಧಿಕಾರಿಗೆ ವರ್ಗಾವಣೆ ಆದೇಶ ಹೊರಡಿಸಿದರೂ ಆಶ್ಚರ್ಯವಿಲ್ಲ! ಎಂದು ವ್ಯಂಗ್ಯವಾಡಿದ್ದಾರೆ.
ಇದು ಕೇವಲ ಒಂದು ಆಕಸ್ಮಿಕ ಯಡವಟ್ಟು ಅಲ್ಲ. ಇದು ಆಡಳಿತ ವ್ಯವಸ್ಥೆಯ ಸಂಪೂರ್ಣ ಕುಸಿತದ ಸೂಚನೆ. ದಿನಕ್ಕೊಂದು ಎಡವಟ್ಟು, ಕ್ಷಣಕ್ಕೊಂದು ಮುಖಭಂಗ. ಇನ್ನೆಷ್ಟು ದಿನ ಸ್ವಾಮಿ ಈ ಎಡವಟ್ಟು ಸರ್ಕಾರಕ್ಕೆ ಎಡವಟ್ಟು ಮುಖ್ಯಮಂತ್ರಿ ಆಗಿ ತಮ್ಮ ಗೌರವ ಕಳೆದುಕೊಳ್ಳುತ್ತೀರಿ. ಸಾಕು ಮಾಡಿ ಈ ಭಂಡ ಬಾಳು. ರಾಜೀನಾಮೆ ಕೊಟ್ಟು ಕರ್ನಾಟಕದ ಗೌರವ ಉಳಿಸಿ, ತಮ್ಮ ಇರೋಬರೋ ಅಲ್ಪ ಸ್ವಲ್ಪ ಗೌರವವನ್ನಾದರೂ ಉಳಿಸಿಕೊಳ್ಳಿ ಎಂದು ಹೇಳಿದ್ದಾರೆ.

