ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಇರುವ ಅಧಿಕಾರಿ ವರ್ಗಾವಣೆಯ ಟಿಪ್ಪಣಿ ಈಗ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಈ ಲೆಟರ್ ಹೆಡ್ ನಕಲಿ ಎಂದು ಸ್ವತಃ ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಬಿಜೆಪಿ ನಾಯಕ ವಿ.ಸುನಿಲ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಸಿಎಂ ಸಹಿ ಇರುವ ಪತ್ರವೇ ನಕಲಿ ಎಂದಾದರೆ ಇನ್ನು ಸಿಎಂ ಕಚೇರಿ ಹೇಗೆ ಕಾರ್ಯ ನಿರ್ವಹಿಸುತ್ತಿದೆ? ಎಂಬುದನ್ನು ಯೋಚಿಸಬೇಕಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
‘ಸಿಎಂ ಸಿದ್ದರಾಮಯ್ಯನವರಿಗೆ ಈಗ ಖುರ್ಚಿಯ ಮೇಲಷ್ಟೇ ಗಮನ ಕಚೇರಿಯ ಮೇಲೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಪತ್ರ ನಕಲಿ ಎಂದಾದರೆ ಪತ್ರದಲ್ಲಿರುವ ಸಹಿಯ ಅಸಲಿಯತ್ತೇನೆಂಬುದೂ ಇತ್ಯರ್ಥವಾಗಬೇಕು. ಹೀಗಾಗಿ ಈ ಸಹಿ ಅಸಲಿಯೋ, ನಕಲಿಯೋ ಎಂಬುದನ್ನು ವಿಧಿ ವಿಜ್ಞಾನ ಪ್ರಯೋಗಾಲಯ (FSL ) ಪರೀಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಇದು ಸಿಎಂ ಕಚೇರಿಯಲ್ಲಿ ನಡೆಯುವ ಬಹುದೊಡ್ಡ ಲೆಡರ್ ಹೆಡ್ ದಂಧೆಯ ಎಳೆಯಾಗಿದ್ದರೂ ಆಶ್ಚರ್ಯ ಇಲ್ಲ. ದಿನಾಂಕವಿಲ್ಲದ ಪತ್ರಕ್ಕೆ ಸಿಎಂ ಏಕೆ ಸಹಿ ಹಾಕಿದರು, ಪತ್ರಕ್ಕೆ ಸಹಿ ಹಾಕಿಸಿದ ವ್ಯಕ್ತಿಗಳು ಯಾರು?, ಅವರಿಗೆ ಇದರಿಂದಾಗುವ ಲಾಭವೇನು ? ಎಂಬುದೂ ತನಿಖೆಯಿಂದ ಬಹಿರಂಗಗೊಳ್ಳಲಿ’ ಎಂದು ಸವಾಲು ಹಾಕಿದರು.
‘ಇಲ್ಲವಾದರೆ ಸಿದ್ದರಾಮಯ್ಯನವರು ಮಾಡಿರುವ ತನಿಖಾದೇಶ kill the messenger ಎಂಬ ತಂತ್ರದಂತಾಗುತ್ತದೆ. ಸಿದ್ದರಾಮಯ್ಯನವರಂತೆ ನಾನೂ ಕೂಡಾ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ. ವಿಪಕ್ಷದಲ್ಲಿರುವ ಜವಾಬ್ದಾರಿಯುತ ಶಾಸಕ. ನನಗೆ ಲಭಿಸಿದ ಈ ಪತ್ರ ಅಸಲಿ ಎಂದೇ ನಂಬಿ ಸರ್ಕಾರದ ಆಡಳಿತಾತ್ಮಕ ಲೋಪಕ್ಕೆ ಇದೊಂದು ಉದಾಹರಣೆ ಎಂದಿದ್ದೇನೆ’ ಎಂದರು.
‘ಈ ರೀತಿಯ ಅಭಿವ್ಯಕ್ತಿಯೇ ತಪ್ಪು ಎನ್ನುವವರು ಕೂಡಾ ಹಿಂದೆ ವಿಪಕ್ಷದಲ್ಲಿದ್ದಾಗ ಏನು ಮಾಡಿದ್ದರೆಂಬುದನ್ನು ವಿವೇಚಿಸಬೇಕಾಗುತ್ತದೆ. ಪತ್ರ ನಕಲಿ ಎಂದು ವಾದಿಸುವವರ ಮೇಲೆಯೂ ಒಂದಿಷ್ಟು ಜವಾಬ್ದಾರಿ ಇದೆ. ಏಕೆಂದರೆ ಇದಕ್ಕೆ ಸಹಿ ಹಾಕಿರುವುದು ರಾಜ್ಯದ ಮುಖ್ಯಮಂತ್ರಿ. ಪತ್ರವೇ ನಕಲಿ ಎನ್ನುವುದಕ್ಕೆ ಮುನ್ನ ಲೆಟರ್ ಹೆಡ್ ಹಗರಣದ ಬಗ್ಗೆಯೂ ತನಿಖೆಯಾಗಲಿ’ ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಸ್ಪಷ್ಟನೆ: ಸಿಎಂ ಸಿದ್ದರಾಮಯ್ಯ ಲೆಟರ್ ಹೆಡ್ ಕುರಿತು ಶುಕ್ರವಾರ ಸ್ಪಷ್ಟನೆ ನೀಡಿದ್ದರು. ಯಾರೋ ಕೆಲವು ಕಿಡಿಗೇಡಿಗಳು ನನ್ನ ಕಚೇರಿಯ ನಕಲಿ ಟಿಪ್ಪಣಿಯೊಂದನ್ನು ಸೃಷ್ಟಿಸಿ, ಮಂಡ್ಯ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ||ಕೆ.ಮೋಹನ್ ಇವರನ್ನು ಮೈಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಅಪಪ್ರಚಾರದಲ್ಲಿ ತೊಡಗಿರುವುದು ಖಂಡನೀಯ ಮತ್ತು ಅತ್ಯಂತ ಗಂಭೀರ ಸ್ವರೂಪದ ಅಪರಾಧವಾಗಿದೆ.
ಈ ಬಗ್ಗೆ ನನ್ನ ಸಚಿವಾಲಯದ ಅಧಿಕಾರಿಗಳು ದೂರು ದಾಖಲಿಸಿದ್ದು, ಪೊಲೀಸ್ ಇಲಾಖೆ ಇದರ ಹಿಂದಿರುವ ದುಷ್ಟರನ್ನು ಪತ್ತೆ ಮಾಡಿ, ಕಾನೂನು ಕ್ರಮ ಕೈಗೊಳ್ಳಲಿದೆ. ಇಂತಹ ನಕಲಿ ಸುದ್ದಿಗಳನ್ನು ನಂಬಿ ಶೇರ್ ಮಾಡುವ ಮುನ್ನ ಜಾಲತಾಣ ಬಳಕೆದಾರರು ಎಚ್ಚರಿಕೆ ವಹಿಸಬೇಕು.
ಈಗಿನ ಫೋಟೋಶಾಪ್/ ಎಐ ಯುಗದಲ್ಲಿ ವಾಟ್ಸ್ಆ್ಯಪ್ ಮಾಹಿತಿಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ಇತರರ ಜೊತೆ ಹಂಚಿಕೊಳ್ಳುವುದು ಕೂಡ ಅಪರಾಧವೆ ಆಗಿದೆ. ಸಕಾರಾತ್ಮಕ ಟೀಕೆಗೆ ನಾವು ಮುಕ್ತರಿದ್ದೇವೆ, ಸುಳ್ಳು ಸುದ್ದಿಗಳ ಅಪಪ್ರಚಾರವನ್ನು ಸಹಿಸುವುದಿಲ್ಲ ಎಂದು ಹೇಳಿದ್ದರು.

