ಹಾಸನ: ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಹೋಗಿದ್ದ ಮಹಿಳೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಪ್ರಿಯಾಂಕಾ (29) ಎಂಬ ಮಹಿಳೆ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆ ಆಗಮಿಸಿದ್ದ ವೇಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಮಹಿಳೆ ಕಾಣೆಯಾಗಿರುವುದು ಕುಟುಂಬದವರಿಗೆ ಆತಂಕವನ್ನುಂಟು ಮಾಡಿದೆ.
ಮದುವೆಗೆಂದು ಒಡವೆಗಳನ್ನು ಧರಿಸಿ ಬಂದಿದ್ದ ಪ್ರಿಯಾಂಕಾ, ಫೆಬ್ರವರಿ 12ರ ರಾತ್ರಿ 8 ಗಂಟೆ ಸುಮಾರಿಗೆ ಹಾಸನ ಜಿಲ್ಲೆಯ ಬೇಲೂರು ಬಸ್ ನಿಲ್ದಾಣದ ಬಳಿಯಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ.
ಪ್ರಿಯಾಂಕಾ ಕಾಣೆಯಾದ ಮರುದಿನ ಬೇಲೂರಿನ ಕಲ್ಕೆರೆ ಸಮೀಪ ಆಕೆಯ ಉಡುಪು, ಚಪ್ಪಲಿ, ವ್ಯಾನಿಟಿ ಬ್ಯಾಗ್ ಪತ್ತೆಯಾಗಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಮೈಮೆಲಿನ ಚಿನ್ನಾಭರಣ, ಹಣಕ್ಕಾಗಿ ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿರಬಹುದೇ ಎಂಬ ಸಂಶಯ ಮೂಡಿಸಿದೆ.
ಕಾಣೆಯಾಗುವ ಮುನ್ನ ಸಂಜೆ 7.30ರ ಸುಮಾರಿಗೆ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದ ಪ್ರಿಯಾಂಕಾ, ಯಾರೋ ಒಬ್ಬರ ಜೊತೆಯಲ್ಲಿ ಸಿಕ್ಕಿದ್ದೇನೆ ಎಂದು ಹೇಳಿ ಫೋನ್ ಕಟ್ ಮಾಡಿದ್ದರು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಈ ಕುರಿತು ದೂರು ನೀಡಲು ಮುಂದಾದರೂ ಪೊಲೀಸರು ತಕ್ಷಣ ಸ್ಪಂದಿಸಿಲ್ಲ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಮಹಿಳೆ ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿದ್ದಾಗಿ ತಿಳಿದುಬಂದಿದ್ದು, ಆಭರಣಗಳಿಗಾಗಿ ಅಪಹರಣ ಅಥವಾ ದೌರ್ಜನ್ಯ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

