“ಓದುವುದೇ ಒಂದು ದೊಡ್ಡ ಜವಾಬ್ದಾರಿ ಅನ್ನುವ ರೀತಿ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದು, ಓದಿನ ಜತೆಗೆ ಸಾಮಾಜಿಕ ಮೌಲ್ಯಗಳನ್ನು ಕಲಿಸುವ ಅಗತ್ಯವಿದೆ” ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಲಾಪ್ರತಿಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಇವತ್ತಿನ ಕಾಲಘಟ್ಟದ ಮಕ್ಕಳು ಮೊಬೈಲ್ಗೀಳಿಗೆ ಬಿದ್ದಿದ್ದು, ಮೊಬೈಲೇ ಎಲ್ಲವು ಅನ್ನುವಂತಾಗಿದೆ. ಮೊಬೈಲ್ ವಿಡಿಯೋ ಗೇಮ್ಸ್ಗಳಿಂದ ಮಕ್ಕಳು ಆತ್ಮಹತ್ಯೆಯಂತಹ ಕೃತ್ಯಕ್ಕೆ ಬಲಿಯಾಗುತ್ತಿರುವುದು ನಿಜಕ್ಕೂ ವಿಪರ್ಯಾಸ” ಎಂದರು.
“ಅಂಕ ಮಾತ್ರ ಮುಖ್ಯವಲ್ಲ, ಸಾಮಾಜಿಕ ಜ್ಞಾನ ಕೂಡ ಮುಖ್ಯ. ಹೀಗಾಗಿ ಓದಿನ ಜತೆಗೆ ಮಕ್ಕಳಿಗೆ ಕ್ರೀಡೆ, ಕಲೆ, ಸಂಗೀತ, ನಾಟಕ ಇತ್ಯಾದಿ ಚಟುವಟಿಕೆಗಳ ಅಗತ್ಯವಿದೆ” ಎಂದು ಸಚಿವರು ಹೇಳಿದರು.
ಕಲೆ, ಸಂಸ್ಕೃತಿಗಳ ಉಳಿವು: “ಕಲೆ ಮತ್ತು ಸಂಸ್ಕೃತಿ ನಾಡಿನ ಎರಡು ಕಣ್ಣುಗಳಿದ್ದಂತೆ. ಯಾವ ನಾಡು ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸುತ್ತದೆಯೋ ಆ ನಾಡಿನ ಅಭಿವೃದ್ಧಿ ತಾನೇ ತಾನಾಗಿ ಆಗುತ್ತದೆ. ಕಲೆ ಮತ್ತು ಸಂಸ್ಕೃತಿಗಳ ಉಳಿವೇ ನಾಡಿನ ಉಳಿವು” ಎಂದರು.
“ಅಂಗೈಯಲ್ಲಿಯೇ ಎಲ್ಲವೂ ಲಭ್ಯವಾಗುತ್ತಿರುವ ಈ ದಿನಮಾನದಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ಮಕ್ಕಳು, ಯುವ ಜನರು ವಿವಿಧ ಆಕರ್ಷಣೆಗೆ ಒಳಗಾಗಿ ತಮ್ಮತನವನ್ನು ಮರೆಯುತ್ತಿರುವುದು ಸಹಜವೇ ಆದರೂ ಇದು ನಾಡಿನ ಸಾಂಸ್ಕೃತಿಕ ಬೆಳವಣಿಗೆಯ ಅಧ್ಯಾಯದಲ್ಲಿ ಆತಂಕಕಾರಿ” ಎಂದು ತಿಳಿಸಿದರು.
“ನಮ್ಮ ಯುವ ಪೀಳಿಗೆಯನ್ನು ನಾಡಿನ ಶ್ರೀಮಂತ ಕಲೆ, ಸಂಸ್ಕೃತಿ, ಪರಂಪರೆಯತ್ತ ಸೆಳೆಯುವ ನಿಟ್ಟಿನಲ್ಲಿ ನಮ್ಮ ಈ ಪ್ರಯತ್ನ ಸಾರ್ಥಕವಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ತಿಳಿಸಿದರು.
“ಇನ್ನು ಈ ಹಿಂದೆ ಅಕಾಡೆಮಿಗಳು ಬೆಂಗಳೂರಿಗೆ ಮಾತ್ರ ಸಿಮೀತವಾಗಿದ್ದವು. ಇಂದು ಇಡೀ ರಾಜ್ಯದಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಅಕಾಡೆಮಿಗಳ ಕಾರ್ಯ ವೈಖರಿ ರಾಜ್ಯ ವ್ಯಾಪ್ತಿ ಪಸರಿಸಿದೆ” ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ್ ಬಿಳಿಮಲೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಡಾ.ಚನ್ನಪ್ಪಕಟ್ಟಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮುಕುಂದರಾಜ್ ಮುಂತಾದವರು ಉಪಸ್ಥಿತರಿದ್ದರು.

