ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕ್ಯಾಂಟೀನ್ನಲ್ಲಿ ಕಾಫಿ ಬಿಲ್ ಕೇಳಿದ್ದಕ್ಕೆ ಪೊಲೀಸರೇ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಆವರಣದಲ್ಲಿರುವ ಕ್ಯಾಂಟೀನ್ ನಲ್ಲಿ ಈ ಘಟನೆ ನಡೆದಿದೆ. ಕೆಂಪೇಗೌಡ ಏರ್ ಪೋರ್ಟ್ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ – ಬಾಳಪ್ಪ, ಕುಮಾರ್ ಮತ್ತು ಗಂಗರಾಜು ಹಲ್ಲೆ ನಡೆಸಿದ ಆರೋಪಿಗಳು.
ನೈಟ್ ಬೀಟ್ (ರಾತ್ರಿ ಗಸ್ತು) ಸಮಯದಲ್ಲಿ ಈ ಮೂವರು ಪೊಲೀಸರು ಕ್ಯಾಂಟೀನ್ಗೆ ಕಾಫಿ ಕುಡಿಯಲು ಹೋಗಿದ್ದರು. ಕಾಫಿ ಕುಡಿದ ನಂತರ ಕ್ಯಾಂಟೀನ್ ಸಿಬ್ಬಂದಿ ಬಿಲ್ ಕೇಳಿದ್ದಕ್ಕೆ, “ಪೊಲೀಸರಾಗಿ ನಾವು ಯಾಕೆ ಬಿಲ್ ಕೊಡಬೇಕು?” ಎಂದು ಉದ್ಧಟತನ ತೋರಿದ್ದಾರೆ.ಬಿಲ್ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಪೊಲೀಸರು ಕ್ಯಾಂಟೀನ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.ಪೊಲೀಸರು ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವ ಸಂಪೂರ್ಣ ದೃಶ್ಯಗಳು ಕ್ಯಾಂಟೀನ್ನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಈ ಸಂಬಂಧ ಸಂತ್ರಸ್ತ ಸಿಬ್ಬಂದಿ ನೀಡಿದ ದೂರಿನ ಮೇರೆಗೆ, ಕೆಂಪೇಗೌಡ ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲೇ ಈ ಮೂವರು ಪೊಲೀಸರ ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದೆ.ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಪೊಲೀಸರೇ ಈ ರೀತಿ ಕಾನೂನು ಕೈಗೆತ್ತಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

