ನವದೆಹಲಿ: ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆ ನಡುವೆಯೇ ದೆಹಲಿಯಲ್ಲಿ ಬೀಡು ಬಿಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೈಕಮಾಂಡ್ ನಾಯಕರನ್ನು ಭೇತಿಯಾಗಿ ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ಇಂದು ಬೆಳಿಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಹಲವಾರು ವಿಚಾರಗಳನ್ನು ಚರ್ಚೆ ನಡೆಸಿದರು.
ನವದೆಹಲಿಯ 10 ಜನಪಥ ರಸ್ತೆಯಲ್ಲಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಡಿಸಿಎಂ ಡಿ.ಕೆ.ಶಿವಕುಮಾರ್, ನಾಯಕತ್ವ ಬದಲಾವಣೆ ವಿಚಾರ, ಪ್ರಸ್ತುತ ರಾಜ್ಯ ರಾಜಕೀಯ ಬೆಳವಣಿಗೆ, ಮುಂಬರುವ ವಿಧಾನಸಭಾ ಚುನಾವಣೆ, ಸದ್ಯದ ಅಸ್ಸಾಂ ಚುನಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ಅಧಿಕಾರ ಹಸ್ತಾಂತರ ವಿಚಾರದ ಬಗ್ಗೆಯೂ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಬಂದಿದ್ದೇನೆ. ಅಸ್ಸಾಂ ಚುನಾವಣೆ ಬಗ್ಗೆ ಮಾತನಡಿದ್ದೇನೆ ಎಂದರು.
ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದೇನೆ. ನಾನು ಯಾರನ್ನು ಭೇಟಿಯಾಗಿದ್ದೇನೆ ಎಂದು ಎಲ್ಲವನ್ನೂ ಹೇಳುವ ಅಗತ್ಯವಿಲ್ಲ. ಒಳಗೆ ಏನು ಮಾತನಾಡಿದೆ? ಯಾವ ಚರ್ಚೆ ನಡೆಯಿತು ಎಂಬುದೆಲ್ಲವನ್ನೂ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಇದು ನಮ್ಮ ಪಕ್ಷದ ವಿಚಾರ. ಪಕ್ಷದ ವಿಚಾರ್ಗಳನ್ನು ನಾವು ಬೀದಿಯಲ್ಲಿ ನಿಂತು ಹೇಳಲು ಸಾಧ್ಯವಿಲ್ಲ. ಹೇಳುವ ಅವಶ್ಯಕತೆಯೂ ಇಲ್ಲ ಎಂದರು.
ವರಿಷ್ಠರನ್ನು ಭೇಟಿಯಾಗಿ ನಾನು ಏನೇನು ಹೇಳಬೇಕೋ ಎಲ್ಲವನ್ನೂ ಹೇಳಿದ್ದೇನೆ. ಪಕ್ಷದ ಅಧ್ಯಕ್ಷನಾಗಿ, ಡಿಸಿಎಂ ಆಗಿ ನಾನು ಹಲವು ವಿಷಗಳ ಬಗ್ಗೆ ಹೈಕಮಾಂಡ್ ಗೆ ತಿಳಿಸಬೇಕಾಗುತ್ತದೆ. ಅದೆಲ್ಲವನ್ನೂ ಇಲ್ಲಿ ಹೇಳಲು ಸಾಧ್ಯವಿಲ್ಲ. ರಾಜಕೀಯ ಮಾಡಲೆಂದೇ ಬಂದಿದ್ದೇನೆ. ದೆಹಲಿಗೆ ಬಂದು ಗಾಳಿಸೇವನೆ ಮಾಡಿ ಹೋಗಲು ಬಂದಿಲ್ಲ. ಏನೇನು ಬೇಕು ಎಲ್ಲವನ್ನು ಹೇಳಿದ್ದೇನೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದು ತಿಳಿಸಿದ್ದಾರೆ.

