ವಾಷಿಂಗ್ಟನ್: ಕೃಷಿ ಉತ್ಪನ್ನಗಳು ವಿಭಾಗದಲ್ಲಿ ಭಾರತದ ಬದ್ಧತೆಗೆ ಜಯ ಸಿಕ್ಕಿದೆ. ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಿಡುಗಡೆ ಮಾಡಿದ್ದ ಫ್ಯಾಕ್ಟ್ ಶೀಟ್ ಅನ್ನು ಪರಿಷ್ಕರಿಸಿರುವ ಶ್ವೇತ ಭವನ ಕೆಲ ತಿದ್ದುಪಡಿ ಮಾಡಿದೆ.
ಒಪ್ಪಂದದಿಂದ ಭಾರತದ ಕೃಷಿ ಕ್ಷೇತ್ರಕ್ಕೆ ಆತಂಕ ಎದುರಾಗಿದೆ ಎನ್ನುವ ಆರೋಪ ಹಿನ್ನೆಲೆಯಲ್ಲಿ ಅಮೆರಿಕ ಫ್ಯಾಕ್ಟ್ ಶೀಟ್ ಪರಿಷ್ಕರಣೆ ಮಾಡಿದೆ. ಬೇಳೆ ಕಾಳುಗಳು ಮತ್ತು ಡಿಜಿಟಲ್ ಸೇವಾ ತೆರಿಗೆಯನ್ನು ಪರಿಷ್ಕೃತ ಆವೃತ್ತಿಯಲ್ಲಿ ಕೈ ಬಿಡಲಾಗಿದೆ.
ಈ ಮೊದಲು ಶ್ವೇತ ಭವನ ಬಿಡುಗಡೆ ಮಾಡಿದ್ದ ಫ್ಯಾಕ್ಟ್ ಶೀಟ್ ನಲ್ಲಿ ಒಣಗಿದ ಡಿಸ್ಟಿಲರ್ಸ್ ಧಾನ್ಯಗಳು, ಕೆಂಪು ಜೋಳ, ಮರದಲ್ಲಿ ಬೆಳೆಯುವ ಬೀಜಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಆಯ್ದ ಬೇಳೆ ಕಾಳುಗಳು, ಸೋಯಾಬಿನ್ ಎಣ್ಣೆ ಮತ್ತು ಸ್ಪಿರಿಟ್ಸ್ ಮೇಲೆ ಭಾರತ ಸುಂಕ ತೆಗೆದು ಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ ಎಂದು ತಿಳಿಸಲಾಗಿತ್ತು. ಆದರೆ ಪರಿಷ್ಕೃತ ತಿದ್ದುಪಡಿ ಮಾಡಿದ ಫ್ಯಾಕ್ಟ್ ಶೀಟ್ ನಲ್ಲಿ ಪ್ರಸ್ತಾವಿತ ಸುಂಕ ಕಡಿತದ ಅಡಿಯಲ್ಲಿ ಬರುವ ಉತ್ಪನ್ನಗಳ ಪಟ್ಟಿಯಿಂದ ಬೇಳೆಕಾಳುಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ.
ಅಮೆರಿಕದಿಂದ ಭಾರತವು 500 ಶತಕೋಟಿ ಡಾಲರ್ ಮೌಲ್ಯದ ಇಂಧನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು, ಇತರೆ ಉತ್ಪನ್ನ ಖರೀದಿಸಲು ಬದ್ಧವಾಗಿದೆ ಎಂದು ಹೇಳಲಾಗಿತ್ತು. ಅದನ್ನೀಗ ಖರೀದಿಸಲು ಉದ್ದೇಶಿಸಲಾಗಿದೆ ಎಂದು ಮಾರ್ಪಾಡು ಮಾಡಲಾಗಿದೆ.
ಭಾರತ ಖರೀದಿಸುವ ಉತ್ಪನ್ನಗಳ ಪಟ್ಟಿಯಿಂದ ಕೃಷಿ ತೆಗೆದು ಹಾಕಲಾಗಿದೆ. ಅಮೆರಿಕದಿಂದ ಭಾರತ ಆಮದು ಮಾಡಿಕೊಳ್ಳುವ ಕೈಗಾರಿಕಾ ಉತ್ಪನ್ನಗಳು, ಕೃಷಿ ಧಾನ್ಯಗಳ ಹೊಟ್ಟು, ಕೆಂಪು ಜೋಳ, ಬಾದಾಮಿ, ಗೋಡಂಬಿ, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬಿನ್, ಎಣ್ಣೆ ಕಾಳುಗಳು ಸೇರಿದಂತೆ ವಿವಿಧ ವಸ್ತುಗಳ ಮೇಲಿನ ಸುಂಕ ತೆಗೆದುಹಾಕಲಿದೆ ಅಥವಾ ಕಡಿಮೆ ಮಾಡಲಿದೆ ಎಂದು ಮೊದಲು ಬಿಡುಗಡೆ ಮಾಡಿದ ಬ್ಯಾಕ್ ಶೀಟ್ ನಲ್ಲಿ ಹೇಳಲಾಗಿತ್ತು. ಇದು ಭಾರತದ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದ್ದುದರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅಮೆರಿಕಕ್ಕೆ ಇದನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪರಿಷ್ಕೃತ ಫ್ಯಾಕ್ಟ್ ಶೀಟ್ ಅನ್ನು ಬಿಡುಗಡೆ ಮಾಡಿದ ಶ್ವೇತ ಭವನ ಕೆಲವೊಂದು ಬೇಳೆ ಕಾಳುಗಳು ಎಂಬ ಪದವನ್ನು ಕೈಬಿಟ್ಟಿದೆ.

