ನವದೆಹಲಿ/ರೋಮ್ : ಕಳೆದ ವರ್ಷ ನಡೆದ ಏರ್ ಇಂಡಿಯಾ AI 171 ವಿಮಾನದ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಇಟಲಿಯ ಪ್ರಖ್ಯಾತ ಪತ್ರಿಕೆ ‘ಕೊರಿಯೆರೆ ಡೆಲ್ಲಾ ಸೆರಾ’ (Corriere della Sera) ಬೆಚ್ಚಿಬೀಳಿಸುವ ಮಾಹಿತಿಯೊಂದನ್ನು ಹೊರಹಾಕಿದೆ. ಕಾಕ್‌ಪಿಟ್‌ನಲ್ಲಿದ್ದ ಪೈಲಟ್ ಒಬ್ಬರು ಉದ್ದೇಶಪೂರ್ವಕವಾಗಿ ಇಂಧನದ ಸ್ವಿಚ್‌ಗಳನ್ನು ಆಫ್ ಮಾಡಿದ್ದೇ ಈ ಮಹಾ ದುರಂತಕ್ಕೆ ಕಾರಣ ಎಂದು ಪತ್ರಿಕೆ ಪ್ರತಿಪಾದಿಸಿದೆ.
ಪಶ್ಚಿಮದ ವಿಮಾನಯಾನ ತನಿಖಾ ಸಂಸ್ಥೆಗಳ ಪ್ರಕಾರ, ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ. ಬದಲಾಗಿ, ಕಾಕ್‌ಪಿಟ್‌ನಲ್ಲಿದ್ದ ಪೈಲಟ್ ಒಬ್ಬರು ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಿದ ಕಾರಣ ವಿಮಾನ ಪತನಗೊಂಡಿದೆ.ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ನಲ್ಲಿ ಓರ್ವ ಪೈಲಟ್ ಮತ್ತೊಬ್ಬರನ್ನು “ನೀನು ಎಂಜಿನ್ ಯಾಕೆ ಬಂದ್ ಮಾಡಿದೆ?” ಎಂದು ಕೇಳಿರುವುದು ದಾಖಲಾಗಿದೆ. ಇದಕ್ಕೆ ಇನ್ನೊಬ್ಬ ಪೈಲಟ್ “ಅದನ್ನು ನಾನು ಮಾಡಿಲ್ಲ” ಎಂದು ಉತ್ತರಿಸಿದ್ದಾನೆ.
ಕ್ಯಾಪ್ಟನ್ ಮೇಲೆ ಅನುಮಾನ: ತನಿಖೆಯ ಪ್ರಕಾರ ಮೊದಲು ಎಡಭಾಗದ ಎಂಜಿನ್ ಬಂದ್ ಆಗಿದೆ. ಸಾಮಾನ್ಯವಾಗಿ ಕ್ಯಾಪ್ಟನ್ ಎಡಭಾಗದ ಸೀಟಿನಲ್ಲಿ ಕುಳಿತುಕೊಳ್ಳುವುದರಿಂದ, ಕ್ಯಾಪ್ಟನ್ ಸುಮೀತ್ ಸಬರ್ವಾಲ್ ಅವರ ಮೇಲೆ ಹೆಚ್ಚಿನ ಅನುಮಾನ ವ್ಯಕ್ತವಾಗಿದೆ
ದುರಂತದ ಹಿನ್ನೆಲೆ:
- ಘಟನೆ ನಡೆದಿದ್ದು: ಜೂನ್ 12, 2025 ರಂದು (ಕಳೆದ ವರ್ಷ).
- ಮಾರ್ಗ: ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್.
- ಸಾವು-ನೋವು: ವಿಮಾನದಲ್ಲಿದ್ದ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು. ವಿಮಾನವು ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಡಿಕ್ಕಿ ಹೊಡೆದಾಗ ಅಲ್ಲಿದ್ದ 19 ಜನರು ಮೃತಪಟ್ಟಿದ್ದರು.
- ಏಕೈಕ ಬದುಕುಳಿದವ: ಈ ಭೀಕರ ಅಪಘಾತದಲ್ಲಿ ವಿಶ್ವಾಸ್ ಕುಮಾರ್ ರಮೇಶ್ ಎಂಬ ಪ್ರಯಾಣಿಕ ಮಾತ್ರ ಪವಾಡಸದೃಶವಾಗಿ ಬದುಕುಳಿದಿದ್ದಾರೆ.
ತನಿಖೆಯ ವರದಿ ಏನು ಹೇಳಬಹುದು?
ಇಟಲಿ ಪತ್ರಿಕೆಯ ಪ್ರಕಾರ, ಭಾರತದ ಅಂತಿಮ ತನಿಖಾ ವರದಿಯಲ್ಲಿ ಇದನ್ನು ‘ಮಾನವ ಸಹಜ ತಪ್ಪು’ ಅಥವಾ ಮೃದುವಾದ ಪದಗಳನ್ನು ಬಳಸಿ ವಿವರಿಸಬಹುದು. ಇದರಿಂದ ಭಾರತದ ವಿಮಾನಯಾನದ ವರ್ಚಸ್ಸಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಪೈಲಟ್‌ಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸ್ಥಿತಿಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖವಿರಲಿದೆ ಎಂದು ಹೇಳಲಾಗಿದೆ.
ಪ್ರಸ್ತುತ ಭಾರತದ AAIB (Aircraft Accidents Investigation Bureau) ಈ ಪ್ರಕರಣದ ತನಿಖೆ ನಡೆಸುತ್ತಿದೆ. ಇದರೊಂದಿಗೆ ಅಮೆರಿಕದ NTSB, ಬೋಯಿಂಗ್ ಕಂಪನಿ ಮತ್ತು ಎಂಜಿನ್ ತಯಾರಿಕಾ ಸಂಸ್ಥೆಯಾದ GE ಏರೋಸ್ಪೇಸ್ ಕೂಡ ತನಿಖೆಯಲ್ಲಿ ಸಾಥ್ ನೀಡುತ್ತಿವೆ.

