ಕೊಲಂಬೊದ ಸಿನ್ಹಳೀಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 12ನೇ ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧ 32 ರನ್ಗಳ ಗೆಲುವನ್ನು ದಾಖಲಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ಫೀಲ್ಡಿಂಗ್ ಆರಿಸಿಕೊಂಡು ಪಾಕಿಸ್ತಾನವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಸಹಿಬ್ಝಾದಾ ಫರ್ಹಾನ್ ಹಾಗೂ ಶದಬ್ ಖಾನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಕಲೆಹಾಕಿ ಯುಎಸ್ಗೆ 191 ರನ್ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಯುಎಸ್ಎ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತು.
ಈ ಮೂಲಕ ಗ್ರೂಪ್ ‘ಎ’ನಲ್ಲಿ 4 ಅಂಕಗಳನ್ನು ಪಡೆದ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಒಂದೇ ಪಂದ್ಯವನ್ನಾಡಿ ಎರಡು ಅಂಕ ಹೊಂದಿರುವ ಭಾರತ ಎರಡನೇ ಸ್ಥಾನಕ್ಕೆ ಇಳಿದಿದೆ.
ಪಾಕಿಸ್ತಾನ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸೈಮ್ ಆಯುಬ್ ಹಾಗೂ ಸಹಿಬ್ಝಾದಾ ಫರ್ಹಾನ್ 54 ರನ್ಗಳ ಜತೆಯಾಟವನ್ನಾಡಿ ಉತ್ತಮ ಆರಂಭವನ್ನು ಕಟ್ಟುಕೊಟ್ಟರು. ಆದರೆ ಸೈಮ್ ಆಯುಬ್ 19 ರನ್ಗೆ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಸಲ್ಮಾನ್ ಆಘಾ ಕೇವಲ 1 ರನ್ಗೆ ಔಟ್ ಆದರು. ಹೀಗೆ 56 ರನ್ಗೆ 2 ವಿಕೆಟ್ ಕಳೆದುಕೊಂಡ ಪಾಕಿಸ್ತಾನಕ್ಕೆ ಮೂರನೇ ವಿಕೆಟ್ಗೆ ಜತೆಯಾದ ಬಾಬರ್ ಅಜಮ್ ಹಾಗೂ ಸಹಿಬ್ಝಾದಾ ಫರ್ಹಾನ್ 81 ರನ್ಗಳ ಜತೆಯಾಟವಾಡಿ ಸುಧಾರಣೆ ತಂದರು. ಬಾಬರ್ ಅಜಮ್ 46 ರನ್ ಗಳಿಸಿದರೆ, ಸಹಿಬ್ಝಾದಾ ಫರ್ಹಾನ್ 41 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 73 ರನ್ ಬಾರಿಸಿದರು. ಮೊಹಮ್ಮದ್ ನವಾಜ್ 5 ರನ್ ಬಾರಿಸಿದರೆ, ಶದಬ್ ಖಾನ್ 12 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 30 ರನ್ ಬಾರಿಸಿದರು. ಇನ್ನುಳಿದಂತೆ ಫಹೀಮ್ ಅಶ್ರಫ್ 1 ರನ್, ಉಸ್ಮಾನ್ ಖಾನ್ ಡಕ್ಔಟ್, ಅಬ್ರಾರ್ ಅಹ್ಮದ್ ಡಕ್ಔಟ್ ಹಾಗೂ ಶಾಹೀನ್ ಅಫ್ರಿದಿ ಅಜೇಯ 9 ರನ್ ಬಾರಿಸಿದರು.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಪರ ಶಾಡ್ಲಿ ವಾನ್ ಶಾಲ್ಕ್ವಿಕ್ ನಾಲ್ಕು ವಿಕೆಟ್, ಸೌರಭ್ ನೇತ್ರಾವಲ್ಕರ್, ಮೊಹಮ್ಮದ್ ಮೊಹ್ಸಿನ್ ಹಾಗೂ ಹರ್ಮೀತ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.
ಯುಎಸ್ಎ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಆಂಡ್ರಿಸ್ ಗೌಸ್ 13 ಹಾಗೂ ಶಯನ್ ಜಹಾಂಗೀರ್ 49 ರನ್ ಬಾರಿಸಿದರು. ಇನ್ನುಳಿದಂತೆ ಮೊನಾಕ್ ಪಟೇಲ್ 3, ಮಿಲಿಂದ್ ಕುಮಾರ್ 29, ಶುಭಮ್ ರಂಜನೆ 51, ಸಂಜಯ್ ಕೃಷ್ಣಮೂರ್ತಿ ಡಕ್ಔಟ್, ಹರ್ಮೀತ್ ಸಿಂಗ್ 6, ಮೊಹಮ್ಮದ್ ಮೊಹ್ಸಿನ್ ಡಕ್ಔಟ್, ಶಾಡ್ಲಿ ವಾನ್ ಶಾಲ್ಕ್ವಿಕ್ ಅಜೇಯ 1 ಹಾಗೂ ಇಶಾನ್ ಆದಿಲ್ ಅಜೇಯ 1 ರನ್ ಕಲೆಹಾಕಿದರು.
ಪಾಕಿಸ್ತಾನದ ಪರ ಉಸ್ಮಾನ್ ತಾರಿಖ್ ಮೂರು ವಿಕೆಟ್, ಶದಬ್ ಖಾನ್ ಎರಡು ವಿಕೆಟ್, ಮೊಹಮ್ಮದ್ ನವಾಜ್, ಅಬ್ರಾರ್ ಅಹ್ಮದ್ ಹಾಗೂ ಶಾಹೀನ್ ಅಫ್ರಿದಿ ತಲಾ ಒಂದೊಂದು ವಿಕೆಟ್ ಪಡೆದರು.

