ನವದೆಹಲಿ: ಭಾರತದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈಶಾನ್ಯ ಭಾರತದ ಮೂಲದ ಚಿರೋ ಎಂಬ ಯುವತಿ, ತಾನು ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಮೂವರು ವ್ಯಕ್ತಿಗಳು ತನ್ನನ್ನು ಹಿಂಬಾಲಿಸಿ, ಅಸಭ್ಯವಾಗಿ ಚುಡಾಯಿಸಿದ (Catcalling) ಭಯಾನಕ ಅನುಭವವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಚಿರೋ ಹಂಚಿಕೊಂಡಿರುವ ವಿಡಿಯೋದಲ್ಲಿ, ಮೂವರು ವ್ಯಕ್ತಿಗಳು ಆಕೆಯನ್ನು ಸತತವಾಗಿ ಹಿಂಬಾಲಿಸುತ್ತಿರುವುದು ಕಾಣಿಸುತ್ತದೆ. “ಅವರಿಗೆ ನಾನು ಹಿಂದಿ ತಿಳಿಯುವುದಿಲ್ಲ ಎಂದು ಅನ್ನಿಸಿದೆ. ನಿಜ ಹೇಳಬೇಕೆಂದರೆ ಇದು ತುಂಬಾ ತಪ್ಪು. ನಾನು ಸ್ವಲ್ಪ ವಿಭಿನ್ನವಾಗಿ ಕಾಣುತ್ತೇನೆ ಎಂಬ ಒಂದೇ ಕಾರಣಕ್ಕೆ ಇಂತಹ ಘಟನೆಗಳು ನನ್ನ ಜೊತೆ ನಡೆಯುತ್ತಿವೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಚಿರೋ ಅವರ ಮಾತುಗಳು ಇಲ್ಲಿವೆ
“ಒಬ್ಬ ಹುಡುಗಿ ಒಬ್ಬಳೇ ನಡೆದುಕೊಂಡು ಹೋಗುವುದನ್ನು ನೋಡಿದರೆ, ಭಾರತೀಯ ಪುರುಷರು ಪ್ರಪಂಚದ ವಿಚಿತ್ರ ಜೀವಿಗಳಂತೆ ವರ್ತಿಸುತ್ತಾರೆ. ನಾನು ದೇವಸ್ಥಾನಕ್ಕೆ ಹೋಗುತ್ತಿದ್ದೇನೆ, ಆದರೆ ಈ ವ್ಯಕ್ತಿಗಳು ನಾನ್-ಸ್ಟಾಪ್ ಆಗಿ ನನ್ನನ್ನು ಚುಡಾಯಿಸುತ್ತಿದ್ದಾರೆ.”
ವಿಡಿಯೋ ಮಾಡುತ್ತಿರುವುದು ಗೊತ್ತಿದ್ದರೂ, ಆ ವ್ಯಕ್ತಿಗಳು ಕಿಂಚಿತ್ತೂ ಭಯವಿಲ್ಲದೆ ನಗುತ್ತಾ, ಜೋರಾಗಿ ಬಾಲಿವುಡ್ ಹಾಡುಗಳನ್ನು ಹಾಡುತ್ತಾ ಆಕೆಯನ್ನು ಹಿಂಬಾಲಿಸಿದ್ದಾರೆ. ಕೊನೆಗೆ ತನ್ನ ಸ್ನೇಹಿತರು ಬರುವವರೆಗೂ ತಾನು ಸುರಕ್ಷಿತವಾಗಿರಲಿಲ್ಲ ಎಂದು ಚಿರೋ ತಿಳಿಸಿದ್ದಾರೆ.
ಟೀಕಾಕಾರರಿಗೆ ತಕ್ಕ ಉತ್ತರ
ಕೆಲವರು ಈ ವಿಡಿಯೋವನ್ನು ಪಬ್ಲಿಸಿಟಿಗಾಗಿ ಮಾಡಲಾಗಿದೆ ಎಂದು ಟೀಕಿಸಿದಾಗ, ಚಿರೋ ಖಡಕ್ ಉತ್ತರ ನೀಡಿದ್ದಾರೆ. “ನಾನು ಈ ಪರಿಸ್ಥಿತಿಯನ್ನು ತಿಳಿಸಲು ವಿಡಿಯೋ ಮಾಡಿದ್ದೇನೆಯೇ ಹೊರತು ಪ್ರಚಾರಕ್ಕಲ್ಲ. ನಾನು ವಿಡಿಯೋದಲ್ಲಿ ನಗುತ್ತಿರುವುದು ಆ ಪರಿಸ್ಥಿತಿಯನ್ನು ಶಾಂತವಾಗಿ ಎದುರಿಸಲು ಮಾತ್ರ. ನಾನು ಕ್ಯಾಮೆರಾ ಮುಂದೆ ಅಳಬೇಕು ಎಂದು ಜನರು ನಿರೀಕ್ಷಿಸಬಾರದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
• ಬೆಳೆಸಿದ ರೀತಿ ಸರಿ ಇಲ್ಲ: “ಭಾರತೀಯ ಪುರುಷರಿಗೆ ಶಿಕ್ಷಣದ ಜೊತೆಗೆ ನೈತಿಕತೆ ಮತ್ತು ಸಂಸ್ಕಾರದ ಅಗತ್ಯವಿದೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ಕ್ಯಾಮೆರಾ ನೋಡಿದರೂ ಅವರಿಗೆ ಭಯವಿಲ್ಲ ಎಂದರೆ, ಮಹಿಳೆಯರು ಮುಕ್ತವಾಗಿ ಓಡಾಡಲು ಸಾಧ್ಯವಾಗದ ಈ ದೇಶ ಎಂದಿಗೂ ಪ್ರಗತಿ ಹೊಂದಲು ಸಾಧ್ಯವಿಲ್ಲ” ಎಂದು ಮತ್ತೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಇದು ನಿಜಕ್ಕೂ ಭಯಾನಕವಾಗಿದೆ. ನ್ಯಾಯಾಂಗ ವ್ಯವಸ್ಥೆಯು ಇಂತಹವರನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ ಎಂಬ ಧೈರ್ಯ ಅವರಿಗೆ ಈ ಮಟ್ಟದ ಅಟ್ಟಹಾಸ ನೀಡಿದೆ” ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

