ಕಳೆದ ಕೆಲ ವರ್ಷಗಳಿಂದ ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ರನ್ ಹೊಳೆ ಸರಾಗವಾಗಿ ಹರಿದು ಬಂದಿತ್ತು. ಈ ಹಿಂದಿನ ಟಿ ಟ್ವೆಂಟಿ ಪಂದ್ಯಗಳಿಗೆ ಹೋಲಿಸಿದರೆ ಆ ರನ್ ಹೊಳೆ ಭಾರೀ ಹೆಚ್ಚಿತ್ತು. ಈ ಹಿಂದೆ ಟಿ ಟ್ವೆಂಟಿ ಪಂದ್ಯಗಳಲ್ಲಿ 180ರಿಂದ 200 ಪೈಪೋಟಿಯ ಗುರಿಯಾಗಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಅದಕ್ಕಿಂತ ಹೆಚ್ಚಿನ ಮೊತ್ತಗಳನ್ನು ತಂಡಗಳು ಕಲೆಹಾಕಲಾರಂಭಿಸಿದ್ದವು.
ಇದು ಕ್ರಿಕೆಟ್ ಕಟ್ಟಾಭಿಮಾನಿಗಳಿಗೆ ಬೇಸರವನ್ನುಂಟುಮಾಡಿದ್ದು ಸುಳ್ಳಲ್ಲ. ದುಬಾರಿ ಟಾರ್ಗೆಟ್ ಆಸೆಗೆ ಬಿದ್ದ ತಂಡಗಳು ಟಿ ಟ್ವೆಂಟಿ ಕ್ರಿಕೆಟ್ನ ರೋಚಕತೆಯನ್ನು ಹಾಳುಮಾಡುತ್ತಿವೆ ಎಂದು ಅಸಮಾಧಾನ ಹೊರಹಾಕುತ್ತಿದ್ದರು. ಇನ್ನು ಬಲಿಷ್ಠ ತಂಡಗಳು ಸಹ ಇದರ ಹಿಂದೆ ಬಿದ್ದಿದ್ದವು. ಆದರೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಆರಂಭದ ಪಂದ್ಯಗಳಲ್ಲೇ ಬಲಿಷ್ಠ ತಂಡಗಳ ಆ ಸೊಕ್ಕನ್ನು ಕ್ರಿಕೆಟ್ ಶಿಶುಗಳು ಮುರಿದಿದ್ದು, ಟಿ ಟ್ವೆಂಟಿ ಕ್ರಿಕೆಟ್ನ ರೋಚಕತೆಯನ್ನು ವಾಪಸ್ ಕರೆತಂದಿವೆ. ಭಾರತ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ನಂತಹ ತಂಡಗಳೇ ಕ್ರಿಕೆಟ್ ಶಿಶುಗಳ ಕಾಟಕ್ಕೆ ಹೈರಾಣಾಗಿಹೋಗಿವೆ.
ಉದ್ಘಾಟನಾ ಪಂದ್ಯದಲ್ಲೇ ಪಾಕ್ಗೆ ಚಮಕ್ ಕೊಟ್ಟ ನೆದರ್ಲೆಂಡ್ಸ್: ಟೂರ್ನಿಯ ಮೊದಲ ಪಂದ್ಯದ ವೇಳೆ ಪಾಕಿಸ್ತಾನವನ್ನು ನೆದರ್ಲೆಂಡ್ಸ್ ಸೋಲಿಸಲಿದೆ ಎಂದೇ ಅನೇಕರು ಊಹಿಸುವ ಮಟ್ಟಕ್ಕೆ ಪ್ರದರ್ಶನವನ್ನು ನೀಡಿತ್ತು. ನೆದರ್ಲೆಂಡ್ಸ್ ನೀಡಿದ್ದ 148 ರನ್ಗಳ ಗುರಿಯನ್ನು ಬೆನ್ನಟ್ಟಿದ್ದ ಪಾಕ್ 114 ರನ್ಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಅಂತಿಮ ಹಂತದಲ್ಲಿ ಫಹೀಮ್ ಆಶ್ರಫ್ 11 ಎಸೆತಗಳಲ್ಲಿ ಅಜೇಯ 29 ರನ್ ಬಾರಿಸಿದ ಕಾರಣ ಪಾಕ್ 3 ಎಸೆತ ಇರುವಾಗ ಗೆದ್ದು ಮಾನ ಉಳಿಸಿಕೊಂಡಿತ್ತು. ಅದೂ ಸಹ ಫಹೀಮ್ ಕೇವಲ 10 ರನ್ ಗಳಿಸಿದ್ದಾಗ ಕ್ಯಾಚ್ ಡ್ರಾಪ್ ಆಗಿತ್ತು. ಆ ಕ್ಯಾಚ್ ಏನಾದರೂ ಪಡೆದಿದ್ದರೆ ನೆದರ್ಲೆಂಡ್ಸ್ ಗೆಲುವು ಸಾಧಿಸುತ್ತಿದ್ದದ್ದು ಪಕ್ಕಾ.
ಭಾರತ ನಡುಗಿಸಿದ ಯುಎಸ್ಎ: ಟೂರ್ನಿ ಆರಂಭದ ದಿನ ವಾಂಖೆಡೆಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಭಾರತ ಕ್ರಿಕೆಟ್ ಶಿಶು ಅಮೆರಿಕಾ ವಿರುದ್ಧ ಸೆಣಸಾಡಿತ್ತು. ಅಮೆರಿಕಾ ರೀತಿಯ ತಂಡ ವಾಂಖೆಡೆ ರೀತಿಯ ರನ್ ಪ್ಯಾರಡೈಸ್ನಲ್ಲಿ ಸಿಕ್ಕಮೇಲೆ ಭಾರತ ಪಕ್ಕಾ 300+ ರನ್ ಬಾರಿಸಲಿದೆ ಎನ್ನಲಾಗಿತ್ತು. ಆದರೆ ಅಮೆರಿಕಾ ಈ ಎಲ್ಲ ಲೆಕ್ಕಗಳನ್ನು ನೆಲಕಚ್ಚಿಸಿತ್ತು. ಭಾರತ ಕೇವಲ 77 ರನ್ಗೆ 6 ವಿಕೆಟ್ ಕಳೆದುಕೊಂಡು ಮುಖಭಂಗದತ್ತ ಸಾಗಿತ್ತು. ಆ ದಿನ ಸೂರ್ಯಕುಮಾರ್ ಯಾದವ್ ಜಾಣ್ಮೆಯ ಆಟವನ್ನಾಡಿ 49 ಎಸೆತಗಳಲ್ಲಿ 84 ರನ್ ಬಾರಿಸದೇ ಇದ್ದಿದ್ದರೆ ಭಾರತ 300 ಅಲ್ಲ 130 ಬಾರಿಸಿ ಗೆದ್ದರೆ ಸಾಕು ಎನ್ನುವ ಹಂತ ತಲುಪಿರುತ್ತಿತ್ತು. ನಾಯಕನ ಈ ಆಟದಿಂದ ಭಾರತ ಹೇಗೋ 162 ರನ್ಗಳ ಗುರಿ ನೀಡಿ 29 ರನ್ಗಳ ಗೆಲುವು ಕಂಡಿತು.
ನ್ಯೂಜಿಲೆಂಡ್ ಎದುರು ಸರಾಗವಾಗಿ ರನ್ ಗಳಿಸಿದ ಅಫ್ಘಾನ್: ಇನ್ನು ನ್ಯೂಜಿಲೆಂಡ್ ತಂಡದ ವಿರುದ್ಧ ಅಫ್ಘಾನಿಸ್ತಾನ ತಂಡ 182 ರನ್ ಬಾರಿಸಿ ಸವಾಲಿನ ಗುರಿಯನ್ನು ಕಲೆಹಾಕಿತ್ತು. ಕಿವೀಸ್ ವಿರುದ್ಧ ಅಫ್ಘಾನ್ ಇಷ್ಟು ಸಲೀಸಾಗಿ ರನ್ ಗಳಿಸಲಿದೆ ಎಂದು ಬಹುತೇಕರು ಊಹಿಸಿರಲಿಲ್ಲ. ಆದರೆ ನ್ಯೂಜಿಲೆಂಡ್ ಗುರಿಯನ್ನು ಮುಟ್ಟಲು ಕಷ್ಟಪಡದೇ ಗೆಲುವಿನ ದಡ ಸೇರಿತ್ತಾದರೂ ಹೆಚ್ಚೇನೂ ಸ್ಟ್ರಾಂಗ್ ಅಲ್ಲದ ತಂಡದ ಬಳಿ ಸವಾಲಿನ ಗುರಿಯನ್ನು ಪಡೆದುಕೊಂಡಿತ್ತು.
ಇಂಗ್ಲೆಂಡ್ಗೆ ಸೋಲಿನ ಭಯ ಹುಟ್ಟಿಸಿದ್ದ ನೇಪಾಳ: ಈ ಮೇಲಿನ ಎಲ್ಲ ಪಂದ್ಯಗಳಿಗಿಂತ ಹೆಚ್ಚು ರೋಚಕತೆಯನ್ನು ಹುಟ್ಟುಹಾಕಿದ್ದು ಇಂಗ್ಲೆಂಡ್ ಹಾಗೂ ನೇಪಾಳ ತಂಡಗಳ ನಡುವೆ ನಡೆದ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 184 ರನ್ ಬಾರಿಸಿ 185 ರನ್ ಗುರಿ ನೀಡಿತ್ತು. ಆದರೆ ನೇಪಾಳ ಈ ಮೊತ್ತವನ್ನು ಬೆನ್ನಟ್ಟುವತ್ತ ಹೆಜ್ಜೆಹಾಕಿತ್ತು. ಜೋಫ್ರಾ ಆರ್ಚರ್ಗೂ ಸಹ ರನ್ ಮಳೆಯನ್ನು ಸುರಿಸಿದ ನೇಪಾಳ ಕೊನೆಯ ಓವರ್ನಲ್ಲಿ ಗೆಲ್ಲಲು 10 ರನ್ ಬೇಕು ಎನ್ನುವ ಮಟ್ಟಕ್ಕೆ ಪಂದ್ಯವನ್ನು ತಂದುನಿಲ್ಲಿಸಿತ್ತು. ಆದರೆ ಕೊನೆಗೆ ನೇಪಾಳ 180 ರನ್ ಕಲೆಹಾಕಿ ಕೇವಲ 4 ರನ್ಗಳಿಂದ ಸೋಲುಂಡಿತು.

