HomeLatest Newsಕಾರ್ ಖರೀದಿ ಬಳಿಕ ವಿಮೆ ವರ್ಗಾಯಿಸದ ವಿಮಾ ಕಂಪನಿಗೆ ದಂಡ

ಕಾರ್ ಖರೀದಿ ಬಳಿಕ ವಿಮೆ ವರ್ಗಾಯಿಸದ ವಿಮಾ ಕಂಪನಿಗೆ ದಂಡ

ಧಾರವಾಡ: ವಕೀಲರ ಕಾರ್ ಗೆ ವಿಮೆ ವರ್ಗಾಯಿಸದ ವಿಮಾ ಕಂಪನಿಗೆ ದಂಡ ವಿಧಿಸಿದ್ದು, ಪರಿಹಾರ ನೀಡಲು ಆದೇಶಿಸಲಾಗಿದೆ.

ಧಾರವಾಡದ ಹಿರಿಯ ವಕೀಲ ಪ್ರೀತಮ್ ರೇಗೆ ಅವರು ಹಳೆ ಕಾರ್ ಅನ್ನು ಜೂನ್-2025 ರಲ್ಲಿ ಖರೀದಿಸಿದ್ದರು. ಆ ವಾಹನದ ಆರ್.ಸಿ. ಮತ್ತು ವಿಮಾ ಪಾಲಿಸಿ ಹಳೆಯ ಮಾಲೀಕರ ಹೆಸರಿನಲ್ಲಿದ್ದವು. ಅದು ರಿಲೈಯನ್ಸ್ ಜನರಲ್ ವಿಮೆಯಾಗಿತ್ತು. ಆ ವಿಮೆ ಮಾರ್ಚ್- 2026ರವರೆಗೆ ಚಾಲ್ತಿಯಿತ್ತು. ವಾಹನ ಖರೀದಿಸಿದ ನಂತರ ಅದರ ಆರ್.ಸಿ. ಯನ್ನು ರೇಗೆಯವರು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು.

ಅದರ ಆಧಾರದ ಮೇಲೆ ಕಾರ್ ನ ವಿಮಾ ಪಾಲಿಸಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಡುವಂತೆ ಕಲಂ 157 ಮೋಟಾರ ವಾಹನ ಕಾಯ್ದೆ ಅಡಿವಿಮಾ ಕಂಪನಿಗೆ ಅರ್ಜಿ ಹಾಕಿದ್ದರು. ವರ್ಗಾವಣೆಗೆ ಅಗತ್ಯವಿರುವ ಶುಲ್ಕ ಕಟ್ಟಿ ಹಲವು ಬಾರಿ ವಿನಂತಿಸಿದರೂ ವಿಮಾ ಕಂಪನಿಯವರು ಅರ್ಜಿದಾರರ ಹೆಸರಿಗೆ ಕಾರ್ ನ ವಿಮೆಯನ್ನು ವರ್ಗಾವಣೆ ಮಾಡಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರು ಲೀಗಲ್ ನೋಟಿಸು ಕಳುಹಿಸಿದರೂ ರಿಲೈಯನ್ಸ್ ಜನರಲ್ ವಿಮಾ ಕಂಪನಿಯವರು ಅರ್ಜಿದಾರ ರೇಗೆಯವರ ಹೆಸರಿಗೆ ವರ್ಗಾವಣೆ ಮಾಡಲಿಲ್ಲ. ಅಂತಹ ವಿಮಾ ಕಂಪನಿಯವರ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಹೇಳಿ ಸದರಿ ವಿಮಾ ಕಂಪನಿಯವರ ವಿರುದ್ಧ ವಕೀಲ ರೇಗೆ ಅವರು ದಿ. 03.10.2025 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ವಾಹನ ಖರೀದಿಸಿದ್ದಾರೆ. ಅವರ ಹೆಸರಿನಲ್ಲಿ ಆ ವಾಹನದ ನೋಂದಣಿ ವರ್ಗಾವಣೆಯಾಗಿದೆ. ಅಂತಹ ಸಂದರ್ಭದಲ್ಲಿ ಅಗತ್ಯ ಶುಲ್ಕ ನೀಡಿ ಅರ್ಜಿ ಸಲ್ಲಿಸಿದಾಗ ಕಲಂ 157 ಮೋ. ವಾ. ಕಾಯ್ದೆ ಅಡಿ ವಿಮಾ ಪಾಲಿಸಿ ವರ್ಗಾವಣೆ ಮಾಡುವುದು ವಿಮಾ ಕಂಪನಿಯವರ ಕರ್ತವ್ಯವಾಗಿದೆ. ಆದರೆ ಈ ಪ್ರಕರಣದಲ್ಲಿ ಸ್ವತಃ ವಕೀಲರೇ ವಿಮಾ ಕಂಪನಿಯವರ ಜೊತೆ ಅರ್ಜಿ ಕಳುಹಿಸಿ ವಿನಂತಿಸಿದರೂ ಮತ್ತು ಲೀಗಲ್ ನೋಟಿಸು ಕೊಟ್ಟರೂ ಎದುರುದಾರ ವಿಮಾ ಕಂಪನಿಯವರು ವಿಮಾ ಪಾಲಿಸಿ ವರ್ಗಾವಣೆಗೆ ಕ್ರಮ ಕೈಗೊಳ್ಳದಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ದೂರು ದಾಖಲಿಸಿದ ನಂತರ ಆಯೋಗ ಛೀಮಾರಿ ಹಾಕಿದ ಮೇಲೆ ವಿಮಾ ಕಂಪನಿಯವರು ಪಾಲಿಸಿ ವರ್ಗಾವಣೆ ಮಾಡಿ ಕೊಟ್ಟರು. ಆದರೂ ದೂರು ದಾಖಲಿಸುವವರೆಗೆ ಪಾಲಿಸಿ ವರ್ಗಾವಣೆ ಮಾಡದ ಮತ್ತು ಅದರಿಂದ ಯಾವುದೇ ದುರ್ಘಟನೆ ನಡೆದರೆ ಆಗಬಹುದಾದ ಪರಿಣಾಮಗಳನ್ನು ಅವಲೋಕಿಸಿ ದೂರುದಾರರಿಗೆ ರೂ.25,000 ಪರಿಹಾರ ಕೊಡುವಂತೆ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.5,000 ಕೊಡುವಂತೆ ಆಯೋಗ ಎದುರುದಾರ/ರಿಲೈಯನ್ಸ್ ಜನರಲ್ ವಿಮಾ ಕಂಪನಿಗೆ ನಿರ್ದೇಶಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular