ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಹಣ ದುರ್ಬಳಕೆ ಆಗುವುದನ್ನು ತಡೆಯಲು ಸರ್ಕಾರ ಹೊಸ ನಿಯಮ ಜಾರಿಗೆ ಮುಂದಾಗಿದೆ.
ಮೃತಪಟ್ಟ ಫಲಾನುಭವಿಗಳ ಖಾತೆಗೂ ಗೃಹಲಕ್ಷ್ಮಿ ಹಣ ಜಮಾ ಆಗುತ್ತಿರುವುದನ್ನು ತಡೆಯಲು ಜೀವಿತ ಪ್ರಮಾಣ ಪತ್ರ(ಲೈಫ್ ಸರ್ಟಿಫಿಕೇಟ್) ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದರು.
ಅವರ ಮನವಿಯನ್ನು ಪುರಸ್ಕರಿಸಿದ ಸಿಎಂ ಕೂಡಲೇ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ನಿವೃತ್ತ ನೌಕರರು ಪಿಂಚಣಿ ಪಡೆಯಲು ಪ್ರತಿ ವರ್ಷ ಬ್ಯಾಂಕಿಗೆ ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯವಾಗಿದ್ದು, ಅದೇ ಮಾದರಿಯನ್ನು ಗೃಹಲಕ್ಷ್ಮಿ ಯೋಜನೆಗೂ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಗೃಹಲಕ್ಷ್ಮಿ ಯೋಜನೆ ಅಡಿ ಸುಮಾರು 1.24 ಕೋಟಿ ಫಲಾನುಭವಿಗಳಿದ್ದು, ಸರ್ಕಾರ 57,300 ಕೋಟಿ ರೂಪಾಯಿಗೂ ಹೆಚ್ಚಿನ ಹಣ ವ್ಯಯ ಮಾಡಿದೆ. ಮೃತರ ಹೆಸರಿನಲ್ಲಿರುವ ಖಾತೆಗೂ ಹಣ ಪಾವತಿಯಾಗುತ್ತಿರುವುದನ್ನು ತಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎನ್ನಲಾಗಿದೆ.

