ಬೆಂಗಳೂರು : ಕಿಲ್ಲರ್ ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಟಿನ್ ಫ್ಯಾಕ್ಟರಿ (Tin Factory) ಬಳಿ ಈ ದಾರುಣ ಘಟನೆ ನಡೆದಿದೆ.
ಬೆಂಗಳೂರಿನ ಕೆ.ಆರ್. ಪುರಂ ಸಮೀಪದ ಟಿನ್ ಫ್ಯಾಕ್ಟರಿ (Tin Factory) ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಮಣಿಪುರ ಮೂಲದ ಯುವತಿಯ ಹನ್ನಾ ಇನಕಾ ಎಂದು ಗುರುತಿಸಲಾಗಿದೆ. ಈ ಘಟನೆ ನಿನ್ನೆ (ಫೆಬ್ರವರಿ 6, ಶುಕ್ರವಾರ) ನಡೆದಿದೆ ಎಂದು ವರದಿಯಾಗಿದೆ.
ಯುವತಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ವೇಗವಾಗಿ ಬಂದ ಬಿಎಂಟಿಸಿ (BMTC) ಬಸ್ ಆಕೆಗೆ ಡಿಕ್ಕಿ ಹೊಡೆದಿದೆ. ದುರದೃಷ್ಟವಶಾತ್ ಆಕೆ ಕೆಳಗೆ ಬಿದ್ದಿದ್ದು, ಬಸ್ಸಿನ ಚಕ್ರ ಆಕೆಯ ತಲೆಯ ಮೇಲೆ ಹರಿದಿದ್ದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಹನ್ನಾ ಇನಕಾ (Hanna Inaka). ಮಣಿಪುರ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು.ಜೀವನೋಪಾಯಕ್ಕೋಸ್ಕರ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದ ಯುವತಿ ದಾರುಣವಾಗಿ ಮೃತಪಟ್ಟಿದ್ದಾರೆ.
ಕಿಲ್ಲರ್ ಬಿಎಂಟಿಸಿ: ಈ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸ್ಥಳೀಯವಾಗಿ ಬಿಎಂಟಿಸಿ ಚಾಲಕರ ಅಜಾಗರೂಕತೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟಿನ್ ಫ್ಯಾಕ್ಟರಿ ಪ್ರದೇಶವು ಅತೀ ಹೆಚ್ಚು ಸಂಚಾರ ದಟ್ಟಣೆ ಹಾಗೂ ಅವ್ಯವಸ್ಥಿತ ರಸ್ತೆ ದಾಟುವಿಕೆಯಿಂದಾಗಿ ಪಾದಚಾರಿಗಳಿಗೆ ‘ಡೆತ್ ಟ್ರ್ಯಾಪ್’ ಆಗಿ ಪರಿಣಮಿಸುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.

