ಮೈಸೂರು: ಗೊಬ್ಬರ ಸಾಗಿಸುತ್ತಿದ್ದ ಲಾರಿ ಹರಿದು ಬೈಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ನಂಜನಗೂಡು ತಾಲೂಕಿನ ಹನುಮನಪುರ ಗೇಟ್ ಬಳಿ ಅಪಘಾತ ಸಂಭವಿಸಿದೆ.
ಮೈಸೂರಿನ ಜೆಪಿ ನಗರ ನಿವಾಸಿ ಚಂದ್ರು(38) ಮತ್ತು ನಡುಕಲು ಮೊಳೆ ಗ್ರಾಮದ ಶೀಲಾ(35) ಮೃತಪಟ್ಟವರು ಎಂದು ಹೇಳಲಾಗಿದೆ. ಚುಂಚನಹಳ್ಳಿಯ ಕಡೆಗೆ ಹೋಗುತ್ತಿದ್ದ ಗೊಬ್ಬರ ತುಂಬಿದ್ದ ಲಾರಿ, ಹನುಮನಪುರ ಗೇಟ್ ಬಳಿ ತಿರುವು ಪಡೆದುಕೊಳ್ಳುತ್ತಿದ್ದ ಸವಾರರಿಗೆ ಡಿಕ್ಕಿ ಹೊಡೆದಿದೆ. ಸವಾರ ಚಂದ್ರು, ಹಿಂಬದಿಯಲ್ಲಿ ಕುಳಿತಿದ್ದ ಶೀಲಾ ಕೆಳಗೆ ಬಿದ್ದಿದ್ದಾರೆ. ಇಬ್ಬರ ಮೇಲೆ ಲಾರಿ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಘು, ಸಿಪಿಐ ಚಂದ್ರಶೇಖರ, ಕವಲಂದೆ ಠಾಣೆ ಪಿಎಸ್ಐ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

