ಹರಾರೆ ಕ್ರೀಡಾಂಗಣದಲ್ಲಿ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಇಂದು ( ಫೆಬ್ರವರಿ 6 ) ನಡೆಯುತ್ತಿದ್ದು, ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡು ವೈಭವ್ ಸೂರ್ಯವಂಶಿ ದಾಖಲೆಯ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಬರೋಬ್ಬರಿ 411 ರನ್ ಕಲೆಹಾಕಿ ಇಂಗ್ಲೆಂಡ್‌ಗೆ 412 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.
ಭಾರತದ ಇನ್ನಿಂಗ್ಸ್: ಸೆಮಿಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ್ದ ಆರನ್ ಜಾರ್ಜ್ ಕೇವಲ 9 ರನ್‌ಗೆ ಔಟ್ ಆಗಿ ವಿಕೆಟ್ ಒಪ್ಪಿಸಿದರು. ಹೀಗೆ ಆರಂಭಿಕ ಆಘಾತ ಕಂಡ ಭಾರತಕ್ಕೆ ಮತ್ತೋರ್ವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅಬ್ಬರಿಸಿ ಬೊಬ್ಬಿರಿದು ಆಸರೆಯಾದರು. ತನ್ನ ಇನ್ನಿಂಗ್ಸ್ ಉದ್ದಕ್ಕೂ ಬೌಂಡರಿ ಹಾಗೂ ಸಿಕ್ಸರ್ ಸುರಿಮಳೆಯನ್ನೇ ಸುರಿಸಿದ ವೈಭವ್ ಸೂರ್ಯವಂಶಿ ಐಸಿಸಿ 50 ಓವರ್‌ಗಳ ಟೂರ್ನಿಗಳ ಫೈನಲ್‌ನಲ್ಲಿ ಅತಿ ಬೇಗನೆ ಶತಕ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಕೇವಲ 55 ಎಸೆತಗಳಿಗೆ ತನ್ನ ಶತಕವನ್ನು ಪೂರೈಸಿದ ವೈಭವ್ 80 ಎಸೆತಗಳಲ್ಲಿ 15 ಸಿಕ್ಸರ್ ಹಾಗೂ 15 ಬೌಂಡರಿಗಳನ್ನು ಬಾರಿಸಿ ಒಟ್ಟು 175 ರನ್ ಚಚ್ಚಿದರು. ವೈಭವ್ ಜತೆ ಸೇರಿ ಎರಡನೇ ವಿಕೆಟ್‌ಗೆ ಉತ್ತಮ ಜತೆಯಾಟವಾಡಿದ ನಾಯಕ ಆಯುಷ್ ಮ್ಹಾತ್ರೆ 53 ರನ್ ಬಾರಿಸಿದರು. ಇನ್ನುಳಿದಂತೆ ವೇದಾಂತ್ ತ್ರಿವೇದಿ 32, ವಿಹಾನ್ ಮಲ್ಹೋತ್ರ 30, ಅಭೀಜ್ಞಾನ್ ಕುಂದು 40, ಆರ್‌ಎಸ್ ಅಂಬರೀಶ್ 18, ಖಿಲಾನ್ ಪಟೇಲ್ 3, ಹೆನಿಲ್ ಪಟೇಲ್ 5, ಕನಿಷ್ಕ್ ಚೌಹಾಣ್ ಅಜೇಯ 37 ರನ್ ಹಾಗೂ ಯಾವುದೇ ಎಸೆತ ಎದುರಿಸದ ದೀಪೇಶ್ ದೇವೇಂದ್ರನ್ ಅಜೇಯರಾಗಿ ಉಳಿದರು.
ಇಂಗ್ಲೆಂಡ್ ಪರ ಜೇಮ್ಸ್ ಮಿಂಟೊ ಮೂರು ವಿಕೆಟ್, ಸೆಬಾಸ್ಟಿಯನ್ ಮಾರ್ಗನ್ ಮತ್ತು ಅಲೆಕ್ಸ್ ಗ್ರೀನ್ ತಲಾ ಎರಡು ವಿಕೆಟ್ ಹಾಗೂ ಮ್ಯಾನಿ ಲಮ್ಸ್‌ಡೆನ್ ಒಂದು ವಿಕೆಟ್ ಪಡೆದರು.

