ಚೆನ್ನೈ: ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣಕ್ಕೆ ಚಿತ್ರ ಬಿಡುಗಡೆ ವಿಳಂಬವಾಗುತ್ತಲೇ ಇದೆ. ಈ ನಡುವೆ ವಿಜಯ್ ಗೆ ಮದ್ರಾಸ್ ಹೈಕೋರ್ಟ್ ಮತ್ತೊಂದು ಶಾಕ್ ನೀಡಿದೆ.
ವಿಜಯ್ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ರಿಲೀಫ್ ನೀಡಲು ನಿರಾಕರಿಸಿದೆ. 2015-16ರ ಐಟಿ ದಾಳಿ ವೇಳೆ 15 ಕೋಟಿ ರೂ. ಆದಾಯ ಬಹಿರಂಗಪಡಿಸದ ಕಾರಣ ತೆರಿಗೆ ಇಲಾಖೆ ವಿಧಿಸಿದ್ದ 1.5 ಕೋಟಿ ರೂ. ದಂಡವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಇದರಿಂದ ವಿಜಯ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆಸ್ತಿ ಬಹಿರಂಗಪಡಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆ ವಿಧಿಸಿದ್ದ ಒಂದೂವರೆ ಕೋಟಿ ರೂಪಾಯಿ ದಂಡದ ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
2015-16ರಲ್ಲಿ ನಟ ದಳಪತಿ ವಿಜಯ್ ಮನೆ ಮೇಲೆ ಐಟಿ ದಾಳಿ ನಡೆಸಿತ್ತು. ಈ ವೇಳೆ ಅವರು 15 ಕೋಟಿ ರೂಪಾಯಿ ಆದಾಯವನ್ನು ತೋರಿಸದೆ, ತೆರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಅವರಿಗೆ ಒಂದೂವರೆ ಕೋಟಿ ರೂಪಾಯಿ ದಂಡ ವಿಧಿಸಿತ್ತು.
ದಳಪತಿ ವಿಜಯ್ ಅವರು 2022ರಲ್ಲಿ ಈ ನೋಟಿಸ್ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವರ್ಷ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಸೆಂದಿಲ್ ಕುಮಾರ್ ರಾಮಮೂರ್ತಿ ಅವರು ಫೆಬ್ರವರಿ 6ಕ್ಕೆ ತೀರ್ಪು ಕಾಯ್ದಿರಿಸಿದ್ದರು. ಇಂದು ತೀರ್ಪು ಪ್ರಕಟವಾಗಿದ್ದು, ಒಂದೂವರೆ ಕೋಟಿ ದಂಡ ರದ್ದು ಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

