ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಮೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಪೊಲೀಸರು ನೋಟಿಸ್ ನೀಡಿದರೂ ವಿಜಯಲಕ್ಷ್ಮೀ ವಿಚಾರಣೆಗೆ ಹಾಜರಾಗದೇ ಮುಂದೂಡುತ್ತಿದ್ದಾರೆ.
ವಿಜಯಲಕ್ಷ್ಮೀ ದರ್ಶನ್ ಅವರಿಗೆ ಅಶ್ಲೀಲ ಕಮೆಂಟ್ ಬಗ್ಗೆ ವಿಜಯಲಕ್ಷ್ಮೀ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ತನಿಖೆ ನಿಟ್ಟಿನಲ್ಲಿ ಪೊಲೀಸರು ವಿಜಯಲಕ್ಷ್ಮೀ ಅವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು. ಫೋನ್ ಕರೆ ಮಾಡಿ ಕೂಡ ಹಲವು ಬಾರಿ ಸೂಚಿಸಿದ್ದರು.
ಕೋರ್ಟ್ ಗೆ ಬಂದು ಹೇಳಿಕೆ ನೀಡುವಂತೆಯೂ ಸೂಚಿಸಿದ್ದರು. ವಿಚಾರಣೆಗೆ ಬರುವುದಾಗಿ ಹೇಳುತ್ತಲೇ ಇರುವ ವಿಜಯಲಕ್ಷ್ಮೀ ಈವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಪೊಲೀಸರು ನೋಟಿಸ್ ನೀಡಿ 17 ದಿನಗಳು ಕಳೆದರೂ ವಿಚಾರಣೆಗೆ ಹಾಜರಾಗದೇ ಮುಂದೂಡುತ್ತಲೇ ಇದ್ದಾರೆ ಎನ್ನಲಾಗಿದೆ. ವಿಜಯಲಕ್ಷ್ಮೀ ದರ್ಶನ್ ವಿಚಾರಣೆಗೆ ಬರದೇ ಹಿಂದೇಟು ಹಾಕುತ್ತಿರುವುದು ಯಾಕೆ? ಎಂಬ ಪ್ರಶ್ನೆ ಮೂಡಿದೆ.

