ಚೆನ್ನೈ : ಡ್ರಗ್ಸ್ ಸರಬರಾಜು ಆರೋಪಕ್ಕೆ ಸಂಬಂಧಿಸಿದಂತೆ ನಟಿ ಮತ್ತು ಸಹ ನಿರ್ದೇಶಕಿ ಸೇರಿದಂತೆ 8 ಮಂದಿ ಬಂಧನವಾಗಿದೆ. ಹೌದು. ತಮಿಳು ಚಿತ್ರರಂಗದ ನಟಿ ಮತ್ತು ಸಹಾಯಕ ನಿರ್ದೇಶಕಿ ಸೇರಿದಂತೆ ಕನಿಷ್ಠ ಎಂಟು ಜನರನ್ನು ಗುರುವಾರ ಬಂಧಿಸಲಾಗಿದೆ.
ಚೆನ್ನೈನ ವಲಸರವಕ್ಕಂನಲ್ಲಿ ಮಾದಕ ದ್ರವ್ಯ ವಿರೋಧಿ ಗುಪ್ತಚರ ಘಟಕದ (ANIU) ದಕ್ಷಿಣ ವಿಭಾಗದ ತಂಡವು ನಡೆಸಿದ ಕಾರ್ಯಾಚರಣೆಯಲ್ಲಿ ಇವರಿಂದ ಮೆಥಾಂಫೆಟಮೈನ್ (Methamphetamine) ಮತ್ತು ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಬಂಧಿತರಲ್ಲಿ ನಟಿ ಅಂಜು ಕೃಷ್ಣ (30) ತಮಿಳಿನ ‘ವೆಳ್ಳಿಮಲೈ’ ಮತ್ತು ಕೆಲವು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ವಿನ್ಸಿ ನಿವೇದಾ (26) ತಮಿಳು ಚಿತ್ರವೊಂದರಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಉಳಿದಂತೆ ವೆಂಕಟೇಶ್ ಕುಮಾರ್ (31), ಕಾರ್ತಿಕ್ ರಾಜ (31), ಯಶ್ವಂತ್ (25), ಶ್ರೀರಾಮ್ (33), ಅಲ್ವಿಬಿನ್ಶಾ (27) ಮತ್ತು ವಿಘ್ನೇಶ್ವರನ್ (33) ಎಂಬುವವರನ್ನು ಬಂಧಿಸಲಾಗಿದೆ.
ಕಾರ್ಯಾಚರಣೆ ನಡೆದಿದ್ದು ಹೇಗೆ?
ANIU ಇನ್ಸ್ಪೆಕ್ಟರ್ ಜಾನಿ ಚೆಲ್ಲಪ್ಪ ಅವರಿಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ, ಪೊಲೀಸರು ಮೊದಲು ನೇಸಪಾಕ್ಕಂನ ವಿಘ್ನೇಶ್ವರನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.ವಿಚಾರಣೆ ವೇಳೆ ತಾನು ಪೋರೂರ್ ಸಮೀಪದ ಕೋವೂರ್ನ ವೆಂಕಟೇಶ್ ಕುಮಾರ್ ಎಂಬಾತನಿಂದ ಮಾದಕ ವಸ್ತುಗಳನ್ನು ಖರೀದಿಸುತ್ತಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಸಿನೆಮಾ ಶೈಲಿಯ ಕಾರ್ಯಾಚರಣೆ: ಪೊಲೀಸರು ವೆಂಕಟೇಶ್ ಕುಮಾರ್ನನ್ನು ಹಿಡಿಯಲು ಗ್ರಾಹಕರ ಸೋಗಿನಲ್ಲಿ (Decoy customer) ಅವನನ್ನು ಸಂಪರ್ಕಿಸಿದರು. ವಲಸರವಕ್ಕಂನ ಗುರುತಿಸಲಾದ ಸ್ಥಳವೊಂದಕ್ಕೆ ತನ್ನ ಕಾರಿನಲ್ಲಿ ಬಂದ ವೆಂಕಟೇಶ್ ಕುಮಾರ್ನನ್ನು ಪೊಲೀಸರು ತಡೆದು ತಪಾಸಣೆ ನಡೆಸಿದರು. ಆ ವೇಳೆ ಕಾರಿನಲ್ಲಿದ್ದ ನಟಿ ಅಂಜು ಕೃಷ್ಣ, ವಿನ್ಸಿ ನಿವೇದಾ ಮತ್ತು ಇತರ ಐವರು ಸಹಚರರನ್ನು ಬಂಧಿಸಲಾಯಿತು.
ಬಂಧಿತರಿಂದ 6 ಗ್ರಾಂ ಮೆಥಾಂಫೆಟಮೈನ್ (Methamphetamine), 7 ಗ್ರಾಂ ಒಜಿ ಗಾಂಜಾ (OG Ganja), 15 ಗ್ರಾಂ ಸಾಮಾನ್ಯ ಗಾಂಜಾ, ಒಂದು ಸ್ಮೋಕಿಂಗ್ ಬಾಂಗ್ (ಸೇದುವ ಉಪಕರಣ), ಒಂದು ಸ್ಟ್ಯಾಂಪ್ (LSD ಇರಬಹುದು), 9 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳನ್ನು ಮತ್ತು ವಶಪಡಿಸಿಕೊಂಡ ವಸ್ತುಗಳನ್ನು ಹೆಚ್ಚಿನ ತನಿಖೆಗಾಗಿ ವಲಸರವಕ್ಕಂ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಎಲ್ಲರನ್ನೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

