ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಸಮಿತಿಯು (MPC) ಇಂದು ತನ್ನ ದ್ವೈಮಾಸಿಕ ಪರಾಮರ್ಶೆಯ ನಿರ್ಧಾರಗಳನ್ನು ಪ್ರಕಟಿಸಿದೆ. ಈ ಬಾರಿಯೂ ಕೇಂದ್ರ ಬ್ಯಾಂಕ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಶೇ. 5.25 ರಲ್ಲೇ ಸ್ಥಿರವಾಗಿರಿಸಲು ನಿರ್ಧರಿಸಿದೆ.
ಹೌದು., ಹಣಕಾಸು ನೀತಿ ಸಮಿತಿಯು (MPC) ಪಾಲಿಸಿ ರೆಪೋ ದರವನ್ನು 5.25% ರಷ್ಟು ಬದಲಾಗದೆ ಉಳಿಸಲು ಮತ್ತು ತಟಸ್ಥ ನಿಲುವನ್ನು (Neutral Stance) ಮುಂದುವರಿಸಲು ನಿರ್ಧರಿಸಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.
ತಟಸ್ಥ ನಿಲುವು: ಆರ್ಬಿಐ ತನ್ನ ಹಣಕಾಸು ನೀತಿಯಲ್ಲಿ ‘ತಟಸ್ಥ ನಿಲುವು’ (Neutral Stance) ತಳೆದಿದೆ. ಅಂದರೆ ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಭವಿಷ್ಯದಲ್ಲಿ ದರಗಳನ್ನು ಏರಿಸುವ ಅಥವಾ ಇಳಿಸುವ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡಿದೆ.
ಗ್ರಾಹಕರಿಗೆ ನಿರಾಳ: ರೆಪೋ ದರ ಬದಲಾಗದ ಕಾರಣ, ಗೃಹ ಸಾಲ (Home Loan), ವಾಹನ ಸಾಲ (Vehicle Loan) ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಹಾಗೂ ಮಾಸಿಕ ಕಂತುಗಳಲ್ಲಿ (EMI) ಯಾವುದೇ ತಕ್ಷಣದ ಏರಿಕೆ ಇರುವುದಿಲ್ಲ. ಇದು ಸಾಮಾನ್ಯ ಜನರಿಗೆ ದೊಡ್ಡ ಸಮಾಧಾನ ತಂದಿದೆ.
ದೇಶದ ಆರ್ಥಿಕತೆಯಲ್ಲಿ ಹಣದುಬ್ಬರವನ್ನು ಹತೋಟಿಯಲ್ಲಿಡಲು ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗವರ್ನರ್ ತಿಳಿಸಿದ್ದಾರೆ.
ಬೆಳವಣಿಗೆಯ ಮುನ್ಸೂಚನೆ: ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ಸದೃಢವಾಗಿ ಬೆಳೆಯುತ್ತಿದೆ ಎಂದು ಸಂಜಯ್ ಮಲ್ಹೋತ್ರಾ ಆಶಾವಾದ ವ್ಯಕ್ತಪಡಿಸಿದ್ದಾರೆ.
ರೆಪೋ ದರ ಎಂದರೇನು ? ವಾಣಿಜ್ಯ ಬ್ಯಾಂಕುಗಳು ತಮಗೆ ಹಣದ ಅವಶ್ಯಕತೆ ಇದ್ದಾಗ ಆರ್ಬಿಐನಿಂದ ಪಡೆಯುವ ಸಾಲದ ಮೇಲಿನ ಬಡ್ಡಿ ದರವನ್ನೇ ರೆಪೊ ದರ ಎನ್ನಲಾಗುತ್ತದೆ. ಇದು ಹೆಚ್ಚಾದರೆ ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಸಾಲದ ಬಡ್ಡಿಯನ್ನೂ ಹೆಚ್ಚಿಸುತ್ತವೆ. RBI ರೆಪೊ ದರವನ್ನು ಬದಲಾಯಿಸದೆ ಇರುವುದರಿಂದ ಬ್ಯಾಂಕ್ಗಳು ನೀಡುವ ಗೃಹ ಸಾಲ ಮತ್ತು ವಾಹನ ಸಾಲಗಳ ಬಡ್ಡಿ ದರಗಳಲ್ಲಿ ಸದ್ಯಕ್ಕೆ ಯಾವುದೇ ಏರಿಕೆ ಕಂಡುಬರುವುದಿಲ್ಲ.

