ಮೈಸೂರು : ಬಿಗ್ ಬಾಸ್ ಕನ್ನಡ ಸೀಸನ್ 11ರ ಮಾಜಿ ಸ್ಪರ್ಧಿ ರಜತ್ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ಅವರ ಫೋಟೋಶೂಟ್ ಗೆ ಸಂಬಂಧಪಟ್ಟದ್ದಾಗಿದೆ.
ಹೌದು. ವಿವಾದಗಳ ಮೂಲಕವೇ ಸುದ್ದಿಯಾಗುವ ಬಿಗ್ ಬಾಸ್ ಕನ್ನಡ ಸೀಸನ್ 11ರ ಮಾಜಿ ಸ್ಪರ್ಧಿ ರಜತ್ ವಿರುದ್ಧ ಈಗ ಮೈಸೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಪಾರಂಪರಿಕ ಕಟ್ಟಡವೊಂದರ ಮುಂದೆ ನಿಯಮ ಮೀರಿ ಫೋಟೋಶೂಟ್ ಮಾಡಿಸಿರುವುದು ಈ ಕಾನೂನು ಸಂಕಷ್ಟಕ್ಕೆ ಕಾರಣವಾಗಿದೆ.
ರಜತ್ ಕಿಶನ್ ಇತ್ತೀಚೆಗೆ ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ಫೋಟೋಶೂಟ್ ಮಾಡಿಸಿದ್ದರು. ಈ ವೇಳೆ ಅವರು ಕೈಯಲ್ಲಿ ಸಿಗರೇಟ್ ಹಿಡಿದು, ಹೊಗೆ ಬಿಡುತ್ತಾ ಪೋಸ್ ನೀಡಿದ್ದರು. ಪಾರಂಪರಿಕ ತಾಣಗಳಲ್ಲಿ ಧೂಮಪಾನ ಮಾಡುವುದು ಮತ್ತು ಅಂತಹ ಸ್ಥಳಗಳ ಘನತೆಗೆ ಕುಂದು ತರುವಂತೆ ವರ್ತಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ರಜತ್ ವಿರುದ್ಧ ದೂರು ದಾಖಲಾಗಿದೆ. ಪಾರಂಪರಿಕ ಸ್ಮಾರಕಗಳಿಗೆ ಅಪಮಾನ ಮಾಡಿರುವ ಮತ್ತು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನವನ್ನು ಪ್ರಚೋದಿಸುವ ರೀತಿಯಲ್ಲಿ ವರ್ತಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.ಕನ್ನಡಪರ ಹೋರಾಟಗಾರರು ರಜತ್ ವಿರುದ್ಧ ದೂರು ದಾಖಲಿಸಿದ್ದಾರೆ.
ರಜತ್ ಕಿಶನ್ ಅವರಿಗೆ ವಿವಾದಗಳು ಹೊಸದೇನಲ್ಲ
ಈ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕಾಗಿ ಅವರು ಜೈಲು ಪಾಲಾಗಿದ್ದರು. ಸದಾ ಕಾನೂನು ಬಾಹಿರ ಅಥವಾ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಕೆಲಸಗಳನ್ನು ಮಾಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಬಿಗ್ ಬಾಸ್ನಂತಹ ದೊಡ್ಡ ವೇದಿಕೆಯಿಂದ ಬಂದ ಮೇಲೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದನ್ನು ಕಲಿಯಲಿ” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

