HomeLatest NewsT20 World Cup 2026: ಭಾರತ ಡೇಂಜರಸ್ ತಂಡ ಆದರೆ ಯಾವ ಸ್ಥಾನ ಪಡೆಯಲಿದೆ ಎಂದು...

T20 World Cup 2026: ಭಾರತ ಡೇಂಜರಸ್ ತಂಡ ಆದರೆ ಯಾವ ಸ್ಥಾನ ಪಡೆಯಲಿದೆ ಎಂದು ಹೇಳಲಾರೆ ಎಂದ ಧೋನಿ

ಇದೇ ಫೆಬ್ರವರಿ 7ರಿಂದ ಚುಟುಕು ಕ್ರಿಕೆಟ್ ಮಹಾ ಸಮರ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026 ಆರಂಭಗೊಳ್ಳಲಿದೆ. ಕಳೆದ 2024ರಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಭಾರತ ತಂಡ ಈ ಬಾರಿ ಯಾವ ಮಟ್ಟಕ್ಕೆ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಎದ್ದಿದೆ.

ಇನ್ನು ಚುಟುಕು ಕ್ರಿಕೆಟ್‌ನಿಂದ ದಿಗ್ಗಜ ಕ್ರಿಕೆಟಿಗರು ನಿವೃತ್ತಿ ಪಡೆದುಕೊಂಡಿದ್ದು, ಈ ಮೆಗಾ ಟೂರ್ನಿಯಲ್ಲಿ ಯಂಗ್ ಇಂಡಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬ ಪ್ರಶ್ನೆ ಭಾರತ ಕ್ರಿಕೆಟ್ ತಂಡದ ಪ್ರೇಮಿಗಳಲ್ಲಿ ಮನೆ ಮಾಡಿದೆ.

ಸೂರ್ಯಕುಮಾರ್ ಯಾದವ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲಿದ್ದು, ತಂಡ ತನ್ನ ಮೊದಲ ಪಂದ್ಯವನ್ನು ಉದ್ಘಾಟನಾ ದಿನದಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧ ಆಡಲಿದೆ. ಇನ್ನು ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪರಿಣಿತರು ಟೂರ್ನಿಯಲ್ಲಿ ಯಾವ ತಂಡ ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಊಹಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದರಂತೆ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಉದ್ಘಾಟನಾ ಆವೃತ್ತಿಯಲ್ಲಿಯೇ ಟ್ರೋಫಿ ಎತ್ತಿಹಿಡಿದ ಎಂಎಸ್ ಧೋನಿ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ಪ್ರಸ್ತುತ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿರುವ ಭಾರತ ತಂಡ ಅಪಾಯಕಾರಿಯಾಗಿದೆ. ಅವರು ಈಗಾಗಲೇ ಬ್ಯಾಟಿಂಗ್ ಹಾಗೂ ಬೌಲಿಂಗ್ ಆರಂಭಿಸಿದ್ದಾರೆ. ಒಂದೊಳ್ಳೆ ತಂಡಕ್ಕೆ ಏನು ಬೇಕೋ ಅದೆಲ್ಲ ಈ ತಂಡದಲ್ಲಿದೆ. ಅವರಿಗೆ ಅನುಭವಿದೆ. ವಿಶೇಷವಾಗಿ ಟಿ ಟ್ವೆಂಟಿ ಮಾದರಿ ಕ್ರಿಕೆಟ್‌ಗೆ ಬಂದರೆ ಅನುಭವ ಹೇರಳವಾಗಿದೆ. ಅವರಿಗೆ ಒತ್ತಡದಡಿ ಆಡಿದ ಅನುಭವವಿದೆ. ಯಾರೇ ಯಾವುದೇ ಸ್ಥಾನದಲ್ಲಿ ಆಡುತ್ತಿದ್ದರೂ ಪರಿಸ್ಥಿತಿಗೆ ತಕ್ಕಹಾಗೆ ಅದಕ್ಕೆ ಹೊಂದಿಕೊಂಡು ಆಟವನ್ನಾಡುವ ದಕ್ಷತೆ ಇದೆ’ ಎಂದ ಎಂಎಸ್ ಧೋನಿ ಭಾರತ ತಂಡ ಅಪಾಯಕಾರಿ ಹಾಗೂ ಬಲಿಷ್ಠವಾಗಿದೆ ಎಂದು ಹೊಗಳಿದ್ದಾರೆ.

ಇನ್ನು ಟಿ ಟ್ವೆಂಟಿ ಕ್ರಿಕೆಟ್ ಮೇಲೆ ಪ್ರಭಾವ ಬೀರುವ ಎರಡು ಅಂಶಗಳನ್ನು ಹೆಸರಿಸಿದ ಧೋನಿ ಒಂದು ಅಂಶಕ್ಕೆ ತಾನು ಹೆದರಿದ್ದಾಗಿ ಹೇಳಿಕೊಂಡಿದ್ದಾರೆ. ‘ನನಗೆ ಅತಿಯಾಗಿ ತೊಂದರೆ ಕೊಡುವುದೇನೆಂದರೆ? ಇಬ್ಬನಿ. ಅದನ್ನು ನಾನು ಬಹಳ ದ್ವೇಷಿಸುತ್ತೇನೆ. ನಾನು ಆಡುತ್ತಿರಬೇಕಾದರೆ ನನ್ನನ್ನು ನಿಜವಾಗಿಯೂ ಯಾವುದಾದರೂ ಒಂದು ಅಂಶ ಹೆದರಿಸಿದೆ ಎಂದರೆ ಅದು ಇಬ್ಬನಿ. ಜತೆಗೆ ಟಾಸ್ ಸಹ ಈ ಮಾದರಿಯಲ್ಲಿ ನಿರ್ಣಾಯಕವಾಗಿರುತ್ತದೆ. ಈ ಎರಡು ಅಂಶಗಳು ಸರಿಯಾಗಿದ್ದರೆ ನಾವು ಉತ್ತಮ ತಂಡಗಳ ವಿರುದ್ಧ ಹತ್ತು ಪಂದ್ಯಗಳನ್ನಾಡಿದಾಗ ಹೆಚ್ಚು ಪಂದ್ಯಗಳಲ್ಲಿ ಗೆದ್ದು ಬರಬಹುದು’ ಎಂದರು.

ಬಳಿಕ ಆಟಗಾರರ ಗಾಯದ ಸಮಸ್ಯೆ ಬಗ್ಗೆ ಮಾತನಾಡಿದ ಧೋನಿ ‘ನಿಮ್ಮ ತಂಡದ ಆಟಗಾರ ಅಲಭ್ಯನಾಗಿದ್ದು, ಎದುರಾಳಿ ತಂಡದ ಆಟಗಾರ ಚೆನ್ನಾಗಿ ಆಡಿದನೆಂದರೆ ಅದು ಸಮಸ್ಯೆ. ಇದು ಟಿ ಟ್ವೆಂಟಿ ಪಂದ್ಯಗಳಲ್ಲಿ ನಡೆಯಬಹುದು. ಹೀಗಾಗಿ ತಂಡದ ಯಾವೊಬ್ಬ ಆಟಗಾರ ಸಹ ಗಾಯಕ್ಕೊಳಗಾಗದ ಹಾಗೆ ನಿಗಾ ವಹಿಸಬೇಕು. ಯಾರಿಗೆ ಯಾವ ಪಾತ್ರವನ್ನು ಕೊಟ್ಟಿರುತ್ತಾರೋ ಅದನ್ನು ಪೂರ್ತಿಯಾಗಿ ನಿರ್ವಹಿಸಬೇಕು’ ಎಂದು ಆಟಗಾರರಿಗೆ ಸಲಹೆ ನೀಡಿದರು.

ಅಂತಿಮವಾಗಿ ಟೀಮ್ ಇಂಡಿಯಾ ಟೂರ್ನಿಯಲ್ಲಿ ಯಾವ ಸ್ಥಾನ ಪಡೆಯಬಹುದು ಎಂಬ ಪ್ರಶ್ನೆ ಕುರಿತು ಪ್ರತಿಕ್ರಿಯಿಸಿದ ಧೋನಿ ‘ನಾನು ಈಗಲೇ ಆ ಕುರಿತು ಏನನ್ನೂ ಮಾತನಾಡಿ ಶಕುನ ನುಡಿಯಲು ಇಚ್ಛಿಸುವುದಿಲ್ಲ. ಆದರೆ ಇದೊಂದು ಅಪಾಯಕಾರಿ ತಂಡಗಳಲ್ಲೊಂದು’ ಎಂದು ತಿಳಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular