ಚೆನ್ನೈ: ತಮಿಳುನಾಡಿನ 6 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ಕೆಲವೇ ದಿನಗಳ ಅಂತರದಲ್ಲಿ ಕೆ. ಅಣ್ಣಾಮಲೈ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ತಂದೆಯ ಅನಾರೋಗ್ಯದ ಕಾರಣ ಅವರು ಚುನಾವಣಾ ಉಸ್ತುವಾರಿಯಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದಾರೆ.
ಆದರೆ ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ಜೊತೆಗೆ ಆರು ಕ್ಷೇತ್ರಗಳಿಗೆ ಸೀಮಿತಗೊಳಿಸಿದ್ದರಿಂದ ಅಸಮಾಧಾನಗೊಂಡಿದ್ದಾರೆ. ಇದೇ ಕಾರಣಕ್ಕೆ ಅವರು ಉಸ್ತುವಾರಿ ತೊರೆದಿದ್ದಾರೆ ಎಂದು ಹೇಳಲಾಗಿದೆ.
ದಿಢೀರ್ ಬೆಳವಣಿಗೆಯಲ್ಲಿ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷರಾಗಿರುವ ಕೆ. ಅಣ್ಣಾಮಲೈ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಗೆ ವಹಿಸಿದ್ದ 6 ಕ್ಷೇತ್ರಗಳ ಉಸ್ತುವಾರಿ ಹೊಣೆಯಿಂದ ಹಿಂದೆ ಸರಿದಿದ್ದಾರೆ. ಅಣ್ಣಾಮಲೈ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದ್ದ ಸಿಂಗಾನಲ್ಲೂರು ಕ್ಷೇತ್ರವೂ ಇದರಲ್ಲಿ ಸೇರಿದೆ.
ನನ್ನ ತಂದೆಗೆ ಅನಾರೋಗ್ಯದ ಕಾರಣ ಅವರನ್ನು ನೋಡಿಕೊಳ್ಳಲು ಕೊಯಮುತ್ತೂರಿನಲ್ಲಿಯೇ ಉಳಿದುಕೊಂಡಿದ್ದೇನೆ. ಅದು ನನ್ನ ಮೊದಲ ಕರ್ತವ್ಯ. ಆದ್ದರಿಂದ ಚುನಾವಣಾ ಕೆಲಸಗಳನ್ನು ಮಾಡಲು ಮತ್ತು ಹೆಚ್ಚು ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉಸ್ತುವಾರಿಯಿಂದ ಹಿಂದೆ ಸರಿಯುವುದಾಗಿ ಅಣ್ಣಾಮಲೈ ಮಾಹಿತಿ ನೀಡಿದ್ದಾರೆ. ಪಕ್ಷವು ಈ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ಮರು ನಿಯೋಜಿಸಲಿದೆ. ಇದನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.

