ಬೆಂಗಳೂರು: ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ವಿಪಕ್ಷ ನಾಯಕ ಆರ್.ಅಶೋಕ್ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ರಾಅಜೀನಾಮೆಗೆ ಒತ್ತಾಯಿಸುತ್ತಿದ್ದಂತೆ ವಿಅಪ್ಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಗದ್ದಲಕ್ಕೆ ಕಾರಣವಾಯಿತು.
ವಿಧಾನಸಭೆಯಲ್ಲಿ ಅಬಕಾರಿ ಇಲಾಖೆ ಹರಗಣ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಅಬಕಾರಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ತನಿಖಾ ವರದಿ ಬರುವವರೆಗೂ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಬಿಜೆಪಿಯ ಇತರ ಸದಸ್ಯರೂ ದ್ವನಿಗೂಡಿಸಿದರು.
ಅಬಕಾರಿ ಇಲಾಖೆಯಲ್ಲಿ ಹೊಸ ರೀತಿಯ ಭ್ರಷ್ಟಾಚಾರ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಚಕಾರ ಎತ್ತದೆ, ಮೌನ ಮೂರ್ತಿ ಆಗಿದ್ದಾರೆ. ಬೇರೆ ರಾಜ್ಯಗಳ ಚುನಾವಣೆಗೆ ಇಲಾಖೆಯಲ್ಲಿ ಹಣ ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪ ಇದೆ. ಗಾಂಧೀಜಿಯ ಬಗ್ಗೆ ಮಾತನಾಡಿದರೆ ಸಾಲದು. ಗಾಂಧೀಜಿ ಆದರ್ಶ ಪಾಲನೆ ಮಾಡಬೇಕಲ್ವಾ? ಅಬಕಾರಿ ಇಲಾಖೆಯಲ್ಲಿ ತಿಂಗಳ ಹಣ ಫಿಕ್ಸ್ ಆಗಿದೆ. ಕಾಸಿಗಾಗಿ ಪೋಸ್ಟಿಂಗ್, ಟ್ರ್ಯಾಪ್ ಆದವರಿಗೆ ಆಯಕಟ್ಟಿನ ಹುದ್ದೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಮದ್ಯ ಮಾರಾಟ ಸಂಘದ ಅಧ್ಯಕ್ಷ ಗುರುಸ್ವಾಮಿ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಪ್ರತೀ ಹಂತದಲ್ಲೂ ಭ್ರಷ್ಟಾಚಾರ ಇದೆ. ಮದ್ಯದ ಅಂಗಡಿ ಹೆಸರು ಬದಲಾಯಿಸಲೂ ಸಹ ಶೇ 5ರಿಂದ 10ರಷ್ಟು ಹಣ ನೀಡಬೇಕು ಎಂದು ಆರೋಪಿಸಿದರು.
ಅಬಕಾರಿ ಇಲಾಖೆಯಲ್ಲಿ 586 ಮದ್ಯದಂಗಡಿಗಳ ಲೈಸೆನ್ಸ್ ಗೆ ಅರ್ಜಿ ಕರೆದಿದ್ದರು. ಇದು ಯಾರಿಗೂ ಗೊತ್ತಾಗಲಿಲ್ಲ, ಆಂಧ್ರದವರೇ ಅರ್ಜಿ ಹಾಕಿದ್ದಾರೆ. ಗುರುಸ್ವಾಮಿ ಅವರೇ ಅಬಕಾರಿ ಅಕ್ರಮದ ಬಗ್ಗೆ ಎಳೆ ಎಳೆಯಾಗಿ ಹೇಳಿದ್ದಾರೆ. ಏನಾಗುತ್ತೋ ಆಗಲಿ, ಮದ್ಯದಂಗಡಿಗಳ ಮಾಲೀಕರ ಪರ ಇರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಭ್ರಷ್ಟಾಚಾರದ ಆಡಿಯೋ ಇರುವ ಪೆನ್ ಡ್ರೈವ್ ಇಲ್ಲಿದೆ ಎಂದು ದಾಖಲೆ ಪ್ರದರ್ಶನ ಮಾಡಿದರು.
ಅಬಕಾರಿ ಇಲಾಖೆಯಲ್ಲಿ ತಿಂಗಳಿಗೆ 10-15ಸಾವಿರ ರೂ. ಒಂದೊಂದು ಅಂಗಡಿಯಿಂದ ಕಲೆಕ್ಷನ್ ಮಾಡಲಾಗುತ್ತಿದೆ. ಸರಾಸರಿ ಇದೇ ತಿಂಗಳು 21 ಕೋಟಿ ರೂ. ಸಂಗ್ರಹಿಸಿದ್ದು, ಅದರಂತೆ ವರ್ಷಕ್ಕೆ 252ಕೋಟಿ ರೂ. ಆಗುತ್ತದೆ ಎಂದು ಆರೋಪಿಸಿದರು.
ಜಂಟಿ ಆಯುಕ್ತ ನಾಗರಾಜಪ್ಪ- ವಕೀಲ ರಮೇಶ್ ನಡುವಿನ ಸಂಭಾಷಣೆ ಆಡಿಯೋ ಇದೆ. ಜಂಟಿ ಆಯುಕ್ತ ನಾಗರಾಜಪ್ಪ 18 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಚಿವರಿಂದ ಅಥವಾ ಅವರ ಮಗ ವಿನಯ್ ಕಡೆಯಿಂದ ಮೆಸೇಜ್ ಬರಬೇಕು ಅಂತ ವಕೀಲ ರಮೇಶ್ ಗೆ ನಾಗರಾಜಪ್ಪ ಆಡಿಯೋದಲ್ಲಿ ಹೇಳಿದ್ದಾನೆ ಎಂದರು. ಇದೇ ವೇಳೆ ಸದನದಲ್ಲಿ ಲೈಸೆನ್ಸ್ ಪಡೆದಿರುವ ಬಾರ್ಗಳ ಮಾಹಿತಿ ನೀಡಿದ ಅವರು, ಬಾರ್, ವೈನ್ ಶಾಪ್, CL-2 ಇಂದ CL-12 ವರೆಗೂ ಒಟ್ಟು 14,229 ಮಳಿಗೆಗಳಿವೆ. ಇಷ್ಟು ಆರೋಗ್ಯ ಕೇಂದ್ರಗಳೇ ಇಲ್ಲ. ಅಷ್ಟು ಬಾರ್ಗಳಿವೆ. ಕಾಂಟ್ರಾಕ್ಟರ್ ರಮೇಶ್ ಲಂಚವನ್ನು ಕಡಿಮೆ ಮಾಡಿಕೊಳ್ಳಿ ಅಂತ ಹೇಳುತ್ತಾರೆ ಎಂದರು.
ಇದೇ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸುನಿಲ್ ಕುಮಾರ್, ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದಿದ್ದರೆ ಸಚಿವರು ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಇಷ್ಟೆಲ್ಲ ದಾಖಲೆಗಳನ್ನು ಕೊಡುತ್ತಿದ್ದರೂ ಕೇಳಿಸಿಕೊಂಡು ಕೂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಈ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ತೀವ್ರ ಗದ್ದಲ-ಕೋಲಾಹಲ ನಡೆದ ಪ್ರಸಂಗವೂ ನಡೆಯಿತು.

