ನವದೆಹಲಿ: ಟೆಕ್ ಕಂಪನಿಗಳಲ್ಲಿ ಉದ್ಯೋಗ ವಜಾ ಪ್ರಕ್ರಿಯೆ ಮುಂದುವರೆದಿದೆ. ಅಮೆಜಾನ್ ನಂತರ ಒರಾಕಲ್ ಕೂಡ ತನ್ನ ಸಂಸ್ಥೆಯಿಂದ 20 ರಿಂದ 30 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲು ಮುಂದಾಗಿದೆ.
ವೆಚ್ಚ ಕಡಿತ ಮತ್ತು ಹೊಸ ಡೇಟಾ ಕೇಂದ್ರ ಸ್ಥಾಪನೆಯ ವೆಚ್ಚ ನಿರ್ವಹಣೆಗಾಗಿ ಒರಾಕಲ್ ಈ ಕ್ರಮ ಕೈಗೊಂಡಿದೆ. ಕಳೆದ ಕೆಲವು ವರ್ಷಗಳಿಂದ ಒರಾಕಲ್ ಹಣಕಾಸಿನ ಒತ್ತಡ ಎದುರಿಸುತ್ತಿತ್ತು. ಹೀಗಾಗಿ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡಿ ಅದನ್ನು ಎಐ ಮತ್ತು ಡೇಟಾ ಸೆಂಟರ್ ಸ್ಥಾಪನೆಗೆ ಬಳಸಲು ಮುಂದಾಗಿದೆ ಎಂದು ಹೇಳಲಾಗಿದೆ.
ಹೂಡಿಕೆ ಬ್ಯಾಂಕ್ ಟಿಡಿ ಕೋವೆನ್ ಈ ವಾರ ವರದಿ ಮಾಡಿದ್ದು, ಒರಾಕಲ್ 20,000 ರಿಂದ 30,000 ಉದ್ಯೋಗಗಳನ್ನು ಕಡಿತಗೊಳಿಸುತ್ತಿದೆ. ಈ ಕ್ರಮವು ಅಂದಾಜು $8 ರಿಂದ $10 ಬಿಲಿಯನ್ ನಗದು ಹರಿವನ್ನು ಮುಕ್ತಗೊಳಿಸುತ್ತದೆ.
ಸೆಪ್ಟೆಂಬರ್ 2025 ರಲ್ಲಿ ಗರಿಷ್ಠ ಮಟ್ಟಕ್ಕೆ ಇಳಿದ ನಂತರ, ಒರಾಕಲ್ ಷೇರುಗಳು ಅದರ ಮೌಲ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಸುಮಾರು $463 ಬಿಲಿಯನ್ ಮಾರುಕಟ್ಟೆ ಬಂಡವಾಳೀಕರಣ ಕಳೆದುಹೋಗಿದೆ.
ಅಮೆಜಾನ್ ಇತ್ತೀಚೆಗಷ್ಟೇ 16000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿತ್ತು. ಇದೀಗ ಒರಾಕಲ್ ಕೂಡ ಸುಮಾರು 30 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲು ಮುಂದಾಗಿದೆ.

