HomeKarnatakaBIG NEWS: ಸಿಎಂ ಸಿದ್ದರಾಮಯ್ಯ ಹುಲಿಯಾ ಬದಲು ಇಲಿಯಾ ಆಗಿದ್ದಾರೆ: ವಿಪಕ್ಷ ನಾಯಕ ಆರ್‌.ಅಶೋಕ್ ವ್ಯಂಗ್ಯ

BIG NEWS: ಸಿಎಂ ಸಿದ್ದರಾಮಯ್ಯ ಹುಲಿಯಾ ಬದಲು ಇಲಿಯಾ ಆಗಿದ್ದಾರೆ: ವಿಪಕ್ಷ ನಾಯಕ ಆರ್‌.ಅಶೋಕ್ ವ್ಯಂಗ್ಯ

ಬೆಂಗಳೂರು: ವಿಬಿ ಜಿ ರಾಮ್‌ ಜಿ ಕಾಯ್ದೆಗೆ ರಾಷ್ಟ್ರಪತಿ ಸಹಿ ಹಾಕಿ ಜಾರಿಯಾಗಿದೆ. ಕಾಂಗ್ರೆಸ್ ಸರ್ಕಾರ, ರಾಜ್ಯಪಾಲರ ಭಾಷಣದ ಮೂಲಕ ಕೇವಲ ಸುಳ್ಳುಗಳನ್ನೇ ಹೇಳಿಸಲು ಹೊರಟಿತ್ತು. ಸಿಎಂ ಸಿದ್ದರಾಮಯ್ಯನವರು ಹುಲಿಯಾ ಬದಲು ಇಲಿಯಾ ಆಗಿದ್ದಾರೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ಟೀಕಿಸಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ ಆರ್.ಅಶೋಕ್, ವಿಬಿ ಜಿ ರಾಮ್‌ ಜಿ ಕಾಯ್ದೆಗೆ ರಾಷ್ಟ್ರಪತಿ ಸಹಿ ಹಾಕಿ ಜಾರಿಯಾಗಿದೆ. ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದುಹಾಕಿದ್ದೇಕೆ ಎಂದು ಕಾಂಗ್ರೆಸ್‌ ನಾಯಕರು ಪ್ರಶ್ನಿಸುತ್ತಿದ್ದಾರೆ. ರಾಮನ ಹೆಸರನ್ನು ಕಂಡರೆ ಕಾಂಗ್ರೆಸ್‌ಗೆ ಆಗಲ್ಲ. ಇದೇ ಕಾರಣಕ್ಕೆ ರಾಮನಗರ ಜಿಲ್ಲೆಯ ಹೆಸರನ್ನು ಬದಲಿಸಲಾಗಿದೆ. ರಾಮಲಿಂಗಾರೆಡ್ಡಿ ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಈಗ ಅಲ್ಲಿ ಜಿಲ್ಲೆಯೇ ಇಲ್ಲ. ಮಹಾತ್ಮ ಗಾಂಧೀಜಿಯವರು ರಘುಪತಿ ರಾಘವ ರಾಜಾರಾಮ್‌ ಎಂದು ಹೇಳಿದ್ದರು. ಕಾಂಗ್ರೆಸ್‌ ಸರ್ಕಾರ ಕೇಂದ್ರದ ವಿರುದ್ಧ 18 ನಿರ್ಣಯಗಳನ್ನು ತೆಗೆದುಕೊಂಡಿದೆ. ಹೀಗೆ ಎಲ್ಲಕ್ಕೂ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿದ್ದಾರೆ ಎಂದರು.

ಮಾಜಿ ಪ್ರಧಾನಿಗಳಾದ ಜವಹರಲಾಲ್‌ ನೆಹರು 17 ಬಾರಿ, ಇಂದಿರಾಗಾಂಧಿ 29 ಬಾರಿ, ರಾಜೀವ್‌ಗಾಂಧಿ 10 ಬಾರಿ ಸೇರಿದಂತೆ ಕಾಂಗ್ರೆಸ್‌ ಪಕ್ಷ 72 ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ 14 ಬಾರಿ ಹಾಗೂ ಪ್ರಧಾನಿ ನರೇಂದ್ರ ಮೋದಿ 8 ಬಾರಿ ತಿದ್ದುಪಡಿ ಮಾಡಿದ್ದಾರೆ. ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿದ ಕಾಂಗ್ರೆಸ್‌ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. “ಸಂವಿಧಾನವು ನಿರಂತರವಾಗಿರಬೇಕೆಂದರೆ ನಾವು ಅದನ್ನು ಬದಲಾಯಿಸುತ್ತಿರಬೇಕೆಂದು” ಜವಹರಲಾಲ್‌ ನೆಹರು ಹೇಳಿದ್ದರು. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನದ ಬಗ್ಗೆ ಬೇಜಾರಾಗಿ ಅದನ್ನು ಸುಟ್ಟುಹಾಕುತ್ತೇನೆಂದು ಹೇಳಿದ್ದರು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್‌ ಎಷ್ಟು ಯೋಜನೆಗಳಿಗೆ ಮಹಾತ್ಮ ಗಾಂಧೀಜಿಯ ಹೆಸರಿಟ್ಟಿದೆ? ಆದರೆ ಇಂದಿರಾಗಾಂಧಿ ಕುಟುಂಬದವರ ಹೆಸರುಗಳನ್ನು ಹೆಚ್ಚಾಗಿ ಇರಿಸಲಾಗಿದೆ. ರಾಜೀವ್‌ ಗಾಂಧಿ ಗ್ರಾಮೀಣ ವಿದ್ಯುತ್‌ ಯೋಜನೆ, ರಾಜೀವ್‌ ಗಾಂಧಿ ಕುಡಿಯುವ ನೀರಿನ ಮಿಷನ್‌, ರಾಜೀವ್‌ ಗಾಂಧಿ ರಾಷ್ಟ್ರೀಯ ಶಿಶು ವಿಹಾರ, ಇಂದಿರಾ ಆವಾಸ್‌, ಜವಹರಲಾಲ್‌ ನೆಹರು ನಗರ ನವೀಕರಣ, ನೆಹರು ರೋಜ್‌ಗಾರ್‌, ಇಂದಿರಾಗಾಂಧಿ ಕಾಲುವೆ ಯೋಜನೆ, ರಾಜೀವ್‌ ಗಾಂಧಿ ಸಾಮಾಜಿಕ ಭದ್ರತೆ, ಇಂದಿರಾಗಾಂಧಿ ಪಥ ಯೋಜನೆ, ರಾಜೀವ್‌ ಗಾಂಧಿ ನಾಗರಹೊಳೆ ಅಭಯಾರಣ್ಯ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಜವಹರಲಾಲ್‌ ನೆಹರು ಆಸ್ಪತ್ರೆ, ಹೀಗೆ 454 ಯೋಜನೆ, ಸಂಸ್ಥೆಗಳಿಗೆ ಇವರ ಕುಟುಂಬದವರ ಹೆಸರನ್ನೇ ಇಡಲಾಗಿದೆ ಎಂದರು.

ಗುತ್ತಿಗೆದಾರರು ಮೂರು ಬಾರಿ ಸುದ್ದಿಗೋಷ್ಠಿ ನಡೆಸಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಬಿಜೆಪಿ ಸರ್ಕಾರವಿದ್ದರೂ 40 ಪರ್ಸೆಂಟ್‌ ಎಂದು ಆರೋಪ ಮಾಡಲಾಗಿತ್ತು. ಮಧ್ಯವರ್ತಿಗಳ ಹಾವಳಿ, ಹಿಂದಿನ ಸರ್ಕಾರಕ್ಕಿಂತ ದುಪ್ಪಟ್ಟು ಕಮಿಶನ್‌, 80 ಪರ್ಸೆಂಟ್‌ ಕಮಿಶನ್ ಹೀಗೆ ಮೊದಲಾದ ಆರೋಪಗಳನ್ನು ಮಾಡಿದ್ದಾರೆ. ಅವರು ಮಾಡಿರುವ ಆರೋಪ ರಾಹುಲ್‌ ಗಾಂಧಿಯ ತನಕ ಹೋಗಿದೆ. ಆಂಧ್ರದವರಿಗೆ ಟೆಂಡರ್‌ ನೀಡಲಾಗಿದೆ, ಹಳೆ ಬಿಲ್‌ಗಳಿಗೆ ಹೆಚ್ಚಿನ ಕಮಿಶನ್‌ ಪಡೆಯಲಾಗುತ್ತಿದೆ, 37,370 ಕೋಟಿ ರೂ. ಬಾಕಿ ಇದೆ ಎಂದಿದ್ದರೂ ಸರ್ಕಾರ ಕ್ರಮ ವಹಿಸಿಲ್ಲ, ಮುಷ್ಕರ ಮಾಡದೇ ಬೇರೆ ದಾರಿಯಿಲ್ಲ ಎಂದು ಗುತ್ತಿಗೆದಾರರ ಸಂಘ ತಿಳಿಸಿದೆ. ನಗರಾಭಿವೃದ್ಧಿ ಇಲಾಖೆ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಘ ಪತ್ರ ಬರೆದಿದೆ. ಇಷ್ಟೆಲ್ಲ ಆಪಾದನೆಗಳು ಬಂದರೂ ಗುತ್ತಿಗೆದಾರರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದರೆ, ಸರ್ಕಾರ ತಪ್ಪು ಮಾಡಿದೆ ಎಂದೇ ಅರ್ಥ ಎಂದು ವಾಗ್ದಾಳಿ ನಡೆಸಿದರು.

ಕಲ್ಯಾಣ ಕರ್ನಾಟಕ ಮಂಡಳಿಯ ವತಿಯಿಂದ ಮಾಡಬೇಕಿರುವ ಕಾಮಗಾರಿಗಳನ್ನು ಇನ್ನೂ ನಡೆಸಿಲ್ಲ. ಸರ್ಕಾರದಿಂದ 5,000 ಕೋಟಿ ರೂ. ನೀಡಿದ್ದರೂ ಕಾಮಗಾರಿ ಮಾಡಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಈ ಎಲ್ಲ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಹಿಂದಿನ ಬಿಜೆಪಿ ಬಾಕಿ ಇಟ್ಟುಕೊಂಡಿದೆ ಎಂದು ಹೇಳಿದ್ದಾರೆ. ಹಿಂದೆ 14,000 ಕೋಟಿ ರೂ. ಬಾಕಿ ಬಿಲ್‌ ಇರಿಸಿದ್ದಾಗ ಬಿಜೆಪಿ ಅದನ್ನು ಪಾವತಿಸಿತ್ತು. ಬಿಲ್‌ ಪಾವತಿಸುವುದು ನಿರಂತರ ಪ್ರಕ್ರಿಯೆ. 40 ಪರ್ಸೆಂಟ್‌ ಎಂಬ ಭಿತ್ತಿಪತ್ರಗಳನ್ನು ಕಾಂಗ್ರೆಸ್‌ ನಾಯಕರು ಎಲ್ಲ ಕಡೆ ಅಂಟಿಸಿದ್ದರು. ಈಗ ಈ ಆರೋಪದ ಪತ್ರಗಳನ್ನು ಜನರು ಕಾಂಗ್ರೆಸ್‌ ನಾಯಕರ ಮುಖದ ಮೇಲೆ ಅಂಟಿಸುತ್ತಾರೆ ಎಂದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿರುವಂತೆ, ಅವರು ನಿರ್ಗಮಿಸುವಾಗ 24,000 ಕೋಟಿ ರೂ. ಖಜಾನೆಯಲ್ಲಿ ಬಿಟ್ಟಿದ್ದಾರೆ. ಮೆಟ್ರೊದಲ್ಲಿ 2,000 ಕೋಟಿ ರೂ. ಹಣ ಇತ್ತು. ಆದರೆ ಕಾಂಗ್ರೆಸ್‌ ಬಂದ ನಂತರ ನಿರಂತರ ಭ್ರಷ್ಟಾಚಾರ ನಡೆದಿದೆ. ಮುಡಾದಲ್ಲಿ 3,000 ಕೋಟಿ ರೂ ಅಕ್ರಮ, ಅಬಕಾರಿ ಇಲಾಖೆಯಲ್ಲಿ 6,000 ಕೋಟಿ ರೂ. ಅಕ್ರಮ, ದಲಿತರ 43,000 ಕೋಟಿ ರೂ. ಅಕ್ರಮ ಬಳಕೆ, ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. 30 ವರ್ಷಕ್ಕಾಗಿ ಮಾಡುವ ಕಾಂಕ್ರೀಟ್‌ ರಸ್ತೆ ಉದ್ಘಾಟನೆಗೆ ಮುನ್ನವೇ ಕಿತ್ತುಹೋಗಿದೆ ಎಂದರು.

ಮಹಾತ್ಮ ಗಾಂಧೀಜಿಯವರನ್ನು ಬಳಸಿಕೊಂಡು ಕಾಂಗ್ರೆಸ್‌, ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಭ್ರಷ್ಟಾಚಾರದ ಜಾಹೀರಾತು ಓಡಾಡುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಗುತ್ತಿಗೆದಾರ ಮುನೇಗೌಡ ಎಂಬುವರು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೆ ಮುನ್ನ ತೆರಿಗೆ ಹಾಕಲ್ಲ ಎಂದು ಹೇಳಿ, ನಂತರ 56,000 ಕೋಟಿ ರೂ. ತೆರಿಗೆ ಹಾಕಿದ್ದಾರೆ. 40 ಪರ್ಸೆಂಟ್‌ ಕಮಿಶನ್‌ನಲ್ಲಿ ಉಳಿಸಿದ ಹಣದಿಂದ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ. ಬಜೆಟ್‌ನಲ್ಲಿ 40% ಎಂದರೆ 1.60 ಲಕ್ಷ ಕೋಟಿ ರೂ. ಆಗುತ್ತದೆ. ಎರಡೂ ಸೇರಿದರೆ 2 ಲಕ್ಷ ಕೋಟಿ ರೂ.ಗೂ ಹೆಚ್ಚಾಗುತ್ತದೆ. ಈ ಹಣ ಎಲ್ಲಿದೆ? ಗುತ್ತಿಗೆದಾರರು 80 ಪರ್ಸೆಂಟ್‌ ಕಮಿಶನ್‌ ಬಗ್ಗೆ ಹೇಳಿರುವಾಗ, ಅದು ಸುಳ್ಳಾಗಿದ್ದರೆ ಕ್ರಮ ಕೈಗೊಳ್ಳಬೇಕಿತ್ತು. ಗುತ್ತಿಗೆದಾರರು ಗುತ್ತಿಗೆ ಪಡೆಯುವಾಗಲೇ 12% ಕಮಿಶನ್‌ ಹಾಗೂ ಬಿಲ್‌ ಮಂಜೂರಾತಿಗೆ 7% ನೀಡಬೇಕಾಗುತ್ತದೆ ಎಂದರು.

ಸಿಎಂ ಸಿದ್ದರಾಮಯ್ಯ ಅತಿ ಹೆಚ್ಚು ಅಂದರೆ 7.64 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಕೆಂಗಲ್‌ ಹನುಮಂತಯ್ಯನವರಿಂದ ಆರಂಭವಾಗಿ ಈವರೆಗಿನ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಅತಿ ಹೆಚ್ಚು ಸಾಲ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ರೂ. ಹಣ ನೀಡುತ್ತೇವೆಂದು ಹೇಳಿ ಇನ್ನೂ ನೀಡಿಲ್ಲ. ಆರ್ಥಿಕ ಇಲಾಖೆ ಇನ್ನೂ ಹಣ ನೀಡಿಲ್ಲವೆಂದರೆ, ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಏನು ಮಾಡುತ್ತಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಅನ್ನಭಾಗ್ಯದ 657 ಕೋಟಿ ರೂ. ಮೊತ್ತ ಜನರಿಗೆ ಸಿಕ್ಕಿಲ್ಲ. ಶಾಸಕರ ಪ್ರದೇಶಾಭಿವೃದ್ಧಿ ನೀಡದೆ ಶಾಸಕರು ಪರದಾಡುತ್ತಿದ್ದಾರೆ, ಅಂಗನವಾಡಿ ಸಹಾಯಕರ ಗೌರವಧನ ನೀಡದೆ ಅವರು ಪರದಾಡುತ್ತಿದ್ದಾರೆ, ನೆರೆ ಪರಿಹಾರ ನೀಡದೆ ರೈತರು ಪರದಾಡುತ್ತಿದ್ದಾರೆ. ಆದರೆ ಸಚಿವರು ಹಣ ಮಾಡುವುದರಲ್ಲಿ ಕಿತ್ತಾಟ ಮಾಡುತ್ತಿದ್ದಾರೆ. ಇದು ಇಲ್ಲಗಳ ಸರ್ಕಾರ. ಸರ್ಕಾರದ ಖಜಾನೆಯಲ್ಲಿ ಹೆಗ್ಗಣಗಳ ಕಾಟದಿಂದ ಯಾವ ಹಣವನ್ನೂ ನೀಡಲು ಆಗುತ್ತಿಲ್ಲ. ಸರ್ಕಾರದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದು, ಧಾರವಾಡದಲ್ಲಿ 10 ಸಾವಿರ ಅಭ್ಯರ್ಥಿಗಳು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular