ಕರ್ನಾಟಕ ಸರ್ಕಾರ ಮತ್ತು ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ನೀಡುವ ಕಂಪನಿಗಳ ನಡುವೆ ಬೈಕ್ ಟ್ಯಾಕ್ಸಿ ವಿಚಾರಕ್ಕೆ ಜಟಾಪಟಿ ನಡೆದಿತ್ತು. ಅಂತಿಮವಾಗಿ ಕರ್ನಾಟಕ ಹೈಕೋರ್ಟ್ ಬೈಕ್ ಟ್ಯಾಕ್ಸಿ ಸೇವೆಗೆ ಒಪ್ಪಿಗೆಯನ್ನು ನೀಡಿದೆ. ಇದು ಆಟೋ ಚಾಲಕರ ಆಕ್ರೋಶಕ್ಕೆ ಗುರಿಯಾಗಿದೆ.
ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಈ ಕುರಿತು ಕಾನೂನು ಹೋರಾಟ ಮುಂದುವರೆಸಲು ತೀರ್ಮಾನಿಸಿದೆ. ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಈ ಕುರಿತು ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಗಿದ್ದು, ಬೈಕ್ ಟ್ಯಾಕ್ಸಿ ಕುರಿತ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ SLP ಸಲ್ಲಿಸಲು ಸರ್ಕಾರಕ್ಕೆ ಒಕ್ಕೂಟ ಮನವಿ ಸಲ್ಲಿಸಿದೆ, ಮನವಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ.
ಒಕ್ಕೂಟದ ಮನವಿ ಏನು?: ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳಿಗೆ ಅನುಕೂಲವಾಗುವಂತೆ ನೀಡಲಾದ ಮಾನ್ಯ ಹೈಕೋರ್ಟ್ ತೀರ್ಪಿನ ವಿರುದ್ಧ ಮಾನ್ಯ ಸುಪ್ರೀಂಕೋರ್ಟ್‌ನಲ್ಲಿ Special Leave Petition (SLP) ಸಲ್ಲಿಸುವಂತೆ ಕೋರಿದೆ ಎಂದು ಹೇಳಿದೆ.
ಒಕ್ಕೂಟದ ಅಭಿಪ್ರಾಯದಲ್ಲಿ, ಸದರಿ ತೀರ್ಪು ಕಾನೂನು ವ್ಯಾಖ್ಯಾನ, ಸಾರ್ವಜನಿಕ ಸುರಕ್ಷತೆ, ಸಾರಿಗೆ ನಿಯಂತ್ರಣ ಮತ್ತು ಸರ್ಕಾರದ ನೀತಿ ನಿರ್ಧಾರಾಧಿಕಾರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ತೀರ್ಪು ಅಂತಿಮವಾದರೆ, ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಿ, ಸಾರ್ವಜನಿಕರ ಜೀವ ಭದ್ರತೆಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ.
ಮೋಟಾರ್ ವಾಹನಗಳ ಕಾಯ್ದೆಯ ಪ್ರಕಾರ ಬೋಟಾರ್ ಕ್ಯಾಬ್ ಎಂದರೆ ಪ್ರಯಾಣಿಕರ ಸುರಕ್ಷಿತ ವಾಣಿಜ್ಯ ಸಾರಿಗೆಗಾಗಿ ವಿನ್ಯಾಸಗೊಳಿಸಲ್ಪಟ್ಟ ವಾಹನವೆಂದು ಸ್ಪಷ್ಟವಾಗಿದೆ, ಅದರೆ ಕೇವಲ ಪಿಲ್ಲಿಯನ್ ಸವಾರನನ್ನು ಹೊತ್ತುಕೊಳ್ಳುವ ಸಾಮರ್ಥ್ಯವಿದೆ ಎಂಬ ಕಾರಣಕ್ಕೆ ಮೋಟಾರ್ ಸೈಕಲ್‌ಗಳನ್ನು ಮೋಟಾರ್ ಕ್ಯಾಬ್ ಎಂದು ಪರಿಗಣಿಸಿರುವುದು ಶಾಸನದ ಉದ್ದೇಶಕ್ಕೆ ವಿರುದ್ಧವಾಗಿದೆ. ಮೋಟಾರ್ ಸೈಕಲ್‌ಗಳಲ್ಲಿ ಸುರಕ್ಷತಾ ವ್ಯವಸ್ಥೆಗಳಿಲ್ಲ, ಅಪಘಾತ ಸಂಭವಿಸಿದಲ್ಲಿ ಗಂಭೀರ ಗಾಯ ಅಥವಾ ಜೀವಹಾನಿಯ ಅಪಾಯ ಹೆಚ್ಚು
ಮೋಟಾರ್ ವಾಹನಗಳ ಕಾಯ್ದೆಯಲ್ಲಿ ಬೈಕ್ ಟ್ಯಾಕ್ಸಿಗೆ ಅವಕಾಶವಿಲ್ಲ. ಮೋಟಾರ್ ವಾಹನಗಳ ಕಾಯ್ದೆ, 1988 ಅಥವಾ ಅದರಡಿಯಲ್ಲಿ ರಚಿಸಲಾದ ನಿಯಮಾವಳಿಗಳಲ್ಲಿ “ಬೈಕ್ ಟ್ಯಾಕ್ಸಿ” ಎಂಬ ಯಾವುದೇ ಪ್ರತ್ಯೇಕ ವರ್ಗ ಅಥವಾ ಅನುಮತಿ ನೀಡುವ ವಿಧಾನವಿಲ್ಲ. ಪ್ರಯಾಣಿಕರ ವಾಣಿಜ್ಯ ಸಾರಿಗೆಗೆ ಸಂಬಂಧಿಸಿದಂತೆ ಕಾನೂನುಬದ್ಧವಾಗಿ ವಿನ್ಯಾಸಗೊಳಿಸಲ್ಪಟ್ಟ ಮತ್ತು ಸುರಕ್ಷಿತವಾಗಿ ನಿರ್ಮಿಸಲ್ಪಟ್ಟ ವಾಹನಗಳ ಮೂಲಕ ಮಾತ್ರ ಸಾರಿಗೆ ನಡೆಸುವಂತೆ ಕಾಯ್ದೆ ಹೇಳಿದೆ.
ಮೋಟಾರ್ ಸೈಕಲ್‌ಗಳನ್ನು ಯಾವತ್ತೂ ಒಪ್ಪಂದ ವಾಹನ ಅಥವಾ ಮೋಟಾರ್ ಕ್ಯಾಬ್ ಎಂದು ಶಾಸನ ಮಂಡಳಿ ಪರಿಗಣಿಸಿಲ್ಲ. ಅದ್ದರಿಂದ ಸ್ಪಷ್ಟ ಕಾನೂನು ಚೌಕಟ್ಟಿಲ್ಲದೆ ಬೈಕ್ ಟ್ಯಾಕ್ಸಿಗಳನ್ನು ಅನುಮತಿಸುವುದು ಕಾನೂನು ವ್ಯಾಪ್ತಿಗೆ ಹೊರತಾದ ಕ್ರಮವಾಗುತ್ತದೆ.
ಕೇಂದ್ರ ಮೋಟಾರ್ ವಾಹನ ನಿಯಮಾವಳಿಗಳಲ್ಲಿ ಎರಡು ಚಕ್ರದ ವಾಹನಗಳನ್ನು ಪ್ರತ್ಯೇಕ ವರ್ಗದಲ್ಲಿ ಮತ್ತು ಪ್ರಯಾಣಿಕರ ವಾಹನಗಳನ್ನು ಪ್ರತ್ಯೇಕ ವರ್ಗದಲ್ಲಿ ವರ್ಗೀಕರಿಸಲಾಗಿದೆ. ಇದು ಶಾಸನದ ಸ್ಪಷ್ಟ ಉದ್ದೇಶವನ್ನು ತೋರಿಸುತ್ತದೆ. ಈ ವಿಭಜನೆಗಳನ್ನು ಕಡೆಗಣಿಸುವುದು ಕಾನೂನು ಚೌಕಟ್ಟಿನನ್ನೇ ದುರ್ಬಲಗೊಳಿಸುತ್ತದೆ.
ಅಪಘಾತ ಅಂಕಿಅಂಶಗಳು ಮತ್ತು ಸುರಕ್ಷತಾ ಅಪಾಯ: ನಿಮ್ಹಾನ್ಸ್ ವೈದ್ಯರ ಅಭಿಪ್ರಾಯಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಎರಡು ಚಕ್ರದ ವಾಹನಗಳ ಪಾಲು ಅತ್ಯಂತ ಹೆಚ್ಚು. ಒಟ್ಟು ಅಪಘಾತಗಳಲ್ಲಿ ಸುಮಾರು 70% ರಿಂದ 85% ರಷ್ಟು ಅಪಘಾತಗಳು ಎರಡು ಚಕ್ರದ ವಾಹನಗಳಿಗೆ ಸಂಬಂಧಿಸಿದವು ಎಂಬುದು ತಿಳಿದುಬಂದಿದೆ.
ಮೋಟಾರ್ ಸೈಕಲ್‌ಗಳಲ್ಲಿ ರಕ್ಷಣಾತ್ಮಕ ವ್ಯವಸ್ಥೆಗಳ ಕೊರತೆಯಿಂದ ಗಾಯಗಳು ಗಂಭೀರವಾಗುತ್ತವೆ ಅಥವಾ ಸಾವಿನ ಪ್ರಮಾಣ ಹೆಚ್ಚಾಗುತ್ತದೆ. ಇದು ವಾಣಿಜ್ಯ ಪ್ರಯಾಣಿಕರ ಸಾರಿಗೆಗೆ ಮೋಟಾರ್ ಸೈಕಲ್‌ಗಳು ಸುರಕ್ಷಿತವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದೇ ಸಂದರ್ಭದಲ್ಲಿ, ಬೈಕ್ ಟ್ಯಾಕ್ಸಿಗಳಲ್ಲಿ ಸಂಭವಿಸಿದ ಹಲವಾರು ಅಪಘಾತ ಪ್ರಕರಣಗಳಲ್ಲಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವುದು ವರದಿಯಾಗಿದೆ. ಅನೇಕ ಸಂದರ್ಭಗಳಲ್ಲಿ ಅಗ್ರಿಗೇಟರ್ ಸಂಸ್ಥೆಗಳು, ಯಾವುದೇ ಸಹಾಯ ಅಥವಾ ಪರಿಹಾರ ನೀಡಿಲ್ಲ.
ಅಲ್ಲದೆ, ಪ್ರಯಾಣಿಕರಿಗೆ ವಿಮಾ ರಕ್ಷಣೆಯನ್ನೂ ಒದಗಿಸಲಾಗಿಲ್ಲ ಎಂಬುದು ಗಮನಾರ್ಹ, ಇದರಿಂದ ಸಾರ್ವಜನಿಕರು ಸಂಪೂರ್ಣವಾಗಿ ರಕ್ಷಣೆಯಿಲ್ಲದ ಪರಿಸ್ಥಿತಿಗೆ ತಳ್ಳಲ್ಪಡುತ್ತಾರೆ ಹಾಗೂ ನಿಯಂತ್ರಿತ ಮತ್ತು ವಿಮಾ ರಕ್ಷಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೂಲ ಉದ್ದೇಶವೇ ಹಾಳಾಗುತ್ತದೆ.
ಸುಪ್ರೀಂಕೋರ್ಟ್ ಕೆಲವು ಪ್ರಕರಣಗಳಲ್ಲಿ ಸ್ಪಷ್ಟಪಡಿಸಿರುವಂತೆ, ಸಾರಿಗೆ ಪರವಾನಗಿ ಪಡೆಯುವುದು ಯಾವುದೇ ನಾಗರಿಕನ ಮೂಲಭೂತ ಹಕ್ಕು ಅಲ್ಲ. ಅದು ಕೇವಲ ಕಾನೂನುಬದ್ಧ ಸೌಲಭ್ಯ ಮಾತ್ರ. ರಾಜ್ಯ ಸರ್ಕಾರಕ್ಕೆ ಸಾರ್ವಜನಿಕ ಹಿತಾಸಕ್ತಿಗಾಗಿ ಪರವಾನಗಿಗಳನ್ನು ನಿಯಂತ್ರಿಸುವ, ನಿರ್ಬಂಧಿಸುವ ಅಥವಾ ನಿರಾಕರಿಸುವ ಸಂಪೂರ್ಣ ಅಧಿಕಾರವಿದೆ. ಅದ್ಧರಿಂದ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡದಿರುವುದು ಸಂವಿಧಾನಬಾಹಿರ ಎನ್ನಲು ಸಾಧ್ಯವಿಲ್ಲ ಎಂದು ಮನವಿ ಪತ್ರದಲ್ಲಿ ವಿವರಣೆ ನೀಡಿದೆ.

