ರಾಯಚೂರು: ಜಾತಿಗಣತಿ ವರದಿ ಇನ್ನೊಂದು ತಿಂಗಳಲ್ಲಿ ಸಲ್ಲಿಕೆಯಾಗಲಿದ್ದು, ಸೂಕ್ತ ಚರ್ಚೆ ನಡೆಸಿದ ನಂತರ ಅದನ್ನು ಅಂಗೀಕರಿಸಿ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಿಂಥಿಣಿನಿ ಬ್ರಿಡ್ಜ್ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಆಯೋಜಿಸಿದ್ದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕನಕಗುರು ಪೀಠ ಜಾತ್ಯತೀತವಾಗಿ ಕೆಲಸ ಮಾಡುತ್ತಿದೆ. ಸಿದ್ದರಾಮಾನಂದಪುರಿ ಸ್ವಾಮೀಜಿ ಶಿಕ್ಷಣ, ಆಧ್ಯಾತ್ಮ, ಜಾತ್ಯತೀತ ಮನೋಭಾವಕ್ಕೆ ಒತ್ತು ನೀಡಿದ್ದರು. ಕುರುಬ ಸಮುದಾಯಕ್ಕೆ ಮೊದಲ ಬಾರಿಗೆ ಕಾಗಿನೆಲೆ ಗುರುಪೀಠ 1992 ರಲ್ಲಿ ಸ್ಥಾಪಿತವಾಗಿ ಶ್ರೀ ತಾರಕಾನಂದ ಸ್ವಾಮೀಜಿ ಮೊದಲ ಗುರುಗಳಾಗಿದ್ದರು. ಬೆಂಗಳೂರು, ಮೈಸೂರು, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ವಿಭಾಗಗಳಿದ್ದು, ಪ್ರತ್ಯೇಕ ಗುರುಗಳಿದ್ದಾರೆ. ಈ ವಿಭಾಗದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ಗುರುಪೀಠದಲ್ಲಿ ಶಿಕ್ಷಣ, ಆಧ್ಯಾತ್ಮ, ಜಾತ್ಯತೀತ ಮನೋಭಾವಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಕಾಗಿನೆಲೆ ಗುರುಪೀಠದ ಸ್ಥಾಪನೆಯ ಉದ್ದೇಶವೇ ಸಮ ಸಮಾಜ ನಿರ್ಮಾಣ ಮಾಡುವುದಾಗಿದೆ ಎಂದು ಹೇಳಿದರು.
ಶಿಕ್ಷಣವಿಲ್ಲದೆ ಪ್ರಗತಿ ಸಾಧ್ಯವಿಲ್ಲ. ಕೆಲವರು ಶಿಕ್ಷಣ ದೊರೆತರೂ ಗುಲಾಮಗಿರಿಯ ಮನಸ್ಥಿತಿಯಿಂದ ಹೊರ ಬಂದಿಲ್ಲ. ಸ್ವಾಭಿಮಾನಿಗಳಾಗಿ ಬದುಕುವುದು ಮುಖ್ಯ. ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಮೌಢ್ಯ ಹೋಗಲಾಡಿಸಬೇಕು. ಜಾತಿ ವ್ಯವಸ್ಥೆ ಹೋಗಲಾಡಿಸಬೇಕು ಎಂದರು.

