ಬೆಂಗಳೂರು: ಪ್ರಯಾಣಿಕನೊಬ್ಬ ಬ್ಯಾಗ್ ತಪಾಸಣೆ ವೇಳೆ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಬಾಂಬ್ ಬೆದರಿಕೆ ಹಾಕಿದ್ದಾನೆ. ಅಬು ಅಕಿಲ್ ಅಜರ್ ಚಾದ್ ಎಂಬಾತ ಅಹಮದಾಬಾದ್ ಗೆ ತೆರಳು ಏರ್ ಪೋರ್ಟ್ ಗೆ ಬಂದಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿಗಳು ಎಲ್ಲಾ ಪ್ರಯಾಣಿಕರಿಗೆ ಮಡುವಂತೆ ಆತನ ಬ್ಯಾಗ್ ತಪಾಸಣೆ ಮಾಡಿದ್ದಾರೆ.
ಬ್ಯಾಗ್ ತಪಾಸಣೆ ವೇಳೆ ಆತ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದಿದ್ದಾನೆ. ಬ್ಯಾಗ್ ನ್ನು ಸಂಪೂರ್ಣವಾಗಿ ಚೆಕ್ ಮಾಡಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿ ತನ್ನ ಬ್ಯಾಗ್ ನಲ್ಲಿ ಬಾಂಬ್ ಇದೆ. ಬ್ಯಾಗ್ ನಲ್ಲಿ ಎರಡು ಚಿಕ್ಕ ಚಿಕ್ಕ ಬಾಂಬ್ ಗಳಿವೆ ಎಂದು ಹೇಳಿದ್ದಾನೆ.
ತಕ್ಷಣ ಆತನನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿಗಳು ಏರ್ ಪೋರ್ಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಅಬು ಅಕಿಲ್ ಅಜರ್ ಚಾದ್ ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಎರಡು ಕಡೆ ತನ್ನ ಬ್ಯಾಗ್ ತಪಾಸಣೆ ನಡೆಸಿದರು. ಅದಕ್ಕೆ ಕೋಪಗೊಂಡು ಹಾಗೆ ಹೇಳಿದ್ದಾಗಿ ಬಾಯ್ಬಿಟ್ಟಿದ್ದಾನೆ. ಪ್ರಯಾಣಿಕನ ಹುಚ್ಚಾಟಕ್ಕೆ ಏರ್ ಪೋರ್ಟ್ ನಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

