ಬೆಂಗಳೂರು : ಕರ್ನಾಟಕದ ಸರ್ಕಾರಿ ನೌಕರರ ಆರೋಗ್ಯ ರಕ್ಷಣೆಗಾಗಿ ಜಾರಿಗೆ ತಂದಿರುವ ಆರೋಗ್ಯ ಸಂಜೀವಿನಿ ಯೋಜನೆ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಹೌದು.. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ (KASS) ಸೇರಲು ಅಥವಾ ಹೊರಗುಳಿಯಲು (Opt-in/Opt-out) ಅಭಿಮತ ನೀಡುವ ಅವಧಿಯನ್ನು ವಿಸ್ತರಿಸಿರುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು (opt-in) ಅಥವಾ ಒಳಪಡದೇ (Opt-Out) ಇರುವ ಬಗ್ಗೆ ಲಿಖಿತ ಅಭಿಮತವನ್ನು ಸಂಬಂಧಪಟ್ಟ ಡಿ.ಡಿ.ಓ.ಗಳಿಗೆ ಸಲ್ಲಿಸಲು ಕೊನೆಯ ಬಾರಿಯ ಅವಕಾಶವಾಗಿ, ಕೆಳಕಂಡ ಷರತ್ತಿಗೊಳಪಟ್ಟು, 2026ನೇ ಸಾಲಿನ ಫೆಬ್ರವರಿ ಮಾಹೆಯ ಅಂತ್ಯದವರೆವಿಗೂ ಕಾಲಾವಕಾಶವನ್ನು ವಿಸ್ತರಿಸಿ, ಆದೇಶಿಸಿದೆ.
(i) ಈ ಸರ್ಕಾರಿ ಆದೇಶದನ್ವಯ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡುವ (opt-in) ಹಾಗೂ ಒಳಪಡದೇ (opt-out) ಇರುವ ಬಗ್ಗೆ ಲಿಖಿತ ಅಭಿಮತ ನೀಡುವ ಸರ್ಕಾರಿ ನೌಕರರುಗಳ ಮಾಸಿಕ ವಂತಿಕೆಯನ್ನು 2026ನೇ ಸಾಲಿನ ಫೆಬ್ರವರಿ ಮಾಹೆಯ ವೇತನದಿಂದ ಕಟಾವಣೆಗೊಳಿಸಲು ಹಾಗೂ ಕಟಾವಣೆಗೊಳಿಸದಿರಲು ಕ್ರಮಕೈಗೊಳ್ಳುವಂತೆ ಎಲ್ಲಾ ಇಲಾಖಾ ಮುಖ್ಯಸ್ಥರು / ಡಿ.ಡಿ.ಓ. ಗಳಿಗೆ ಸೂಚಿಸಲಾಗಿದೆ.
(ii) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡದೇ (opt-out) ಇರುವ ಬಗ್ಗೆ ಲಿಖಿತ ಅಭಿಮತವನ್ನು 2026ನೇ ಸಾಲಿನ ಫೆಬ್ರವರಿ ಮಾಹೆಯ ಅಂತ್ಯದವರೆವಿಗೂ ಸಲ್ಲಿಸದೇ ಇರುವ ನೌಕರರು ಈ ಯೋಜನೆಗೆ ಒಳಪಡುವರೆಂದು ಪರಿಗಣಿಸಲಾಗುವುದು (by default opt-in).
ರಾಜ್ಯದ ಎಲ್ಲಾ ಸರ್ಕಾರಿ ನೌಕರರ ದತ್ತಾಂಶ ಸಂಗ್ರಹಣೆಯ ಉದ್ದೇಶದಿಂದ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡುವ ಮತ್ತು ಒಳಪಡದಿರುವ ಬಗ್ಗೆ ಇಚ್ಛೆ ವ್ಯಕ್ತಪಡಿಸುವ ಅಧಿಕಾರಿ/ನೌಕರರ ಮತ್ತು ಅವರ ಕುಟುಂಬದ ವಿವರಗಳನ್ನು HRMS ತಂತ್ರಾಂಶದಲ್ಲಿ ದಾಖಲಿಸಲು ಅವಕಾಶ ಕಲ್ಪಿಸಿದ್ದು, ಅದರಂತೆ, ಎಲ್ಲಾ ಅಧಿಕಾರಿ/ನೌಕರರಿಂದ ಅಗತ್ಯ ಮಾಹಿತಿ/ದಾಖಲಾತಿಗಳನ್ನು ಪಡೆದು HRMS ತಂತ್ರಾಂಶದಲ್ಲಿ ದಾಖಲಿಸಲು ಸಂಬಂಧಪಟ್ಟ ಡಿ.ಡಿ.ಓ.ಗಳು ಕ್ರಮ ಕೈಗೊಳ್ಳತಕ್ಕದ್ದು ಎಂದು ಸರ್ಕಾರದ ಉಪ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.




