HomeInternationalಉಕ್ರೇನ್-ರಷ್ಯಾ ಕದನ ವಿರಾಮ: ಡೊನಾಲ್ಡ್‌ ಟ್ರಂಪ್ ಮಹತ್ವದ ಘೋಷಣೆ

ಉಕ್ರೇನ್-ರಷ್ಯಾ ಕದನ ವಿರಾಮ: ಡೊನಾಲ್ಡ್‌ ಟ್ರಂಪ್ ಮಹತ್ವದ ಘೋಷಣೆ

ಉಕ್ರೇನ್-ರಷ್ಯಾ ಯದ್ಧದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಸ್ವತಃ ಟ್ರಂಪ್ ಈ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸಿದ್ದಾರೆ. ಸುಮಾರು ವರ್ಷಗಳಿಂದ ಉಭಯ ದೇಶಗಳ ನಡುವೆ ಯುದ್ಧ ನಡೆಯುತ್ತಿದೆ.

ಉಕ್ರೇನ್ ರಾಜಧಾನಿ ಕೀವ್ ಮತ್ತು ಇತರ ಪಟ್ಟಣಗಳನ್ನು ಗುರಿಯಾಗಿಸಿಕೊಂಡು ಒಂದು ವಾರದ ತನಕ ದಾಳಿಗಳನ್ನು ಮಾಡುವುದಿಲ್ಲ. ಒಂದು ವಾರದ ಕದನ ವಿರಾಮ ನೀಡಲು ಪುಟಿನ್ ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಘೋಷಣೆ ಮಾಡಿದ್ದಾರೆ.

ಈ ಪ್ರದೇಶಗಳಲ್ಲಿ ಭಾರೀ ಚಳಿ ಇದ್ದು, ಹವಾಮಾನದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಒಂದು ವಾರದ ಕದನ ವಿರಾಮ ಘೋಷಣೆ ಮಾಡಲಾಗಿದೆ ಎಂದು ಶ್ವೇತಭವನದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಟ್ರಂಪ್ ಹೇಳಿದ್ದಾರೆ. ಆದರೆ ರಷ್ಯಾ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟ್ರಂಪ್ ಮಾತನಾಡಿ, “ಈ ಅಸಾಧಾರಣ ಶೀತದ ಸಮಯದಲ್ಲಿ ಒಂದು ವಾರದವರೆಗೆ ಕೀವ್ ಮತ್ತು ನಗರಗಳು ಮತ್ತು ಪಟ್ಟಣಗಳ ಮೇಲೆ ದಾಳಿ ಮಾಡದಂತೆ ನಾನು ಅಧ್ಯಕ್ಷ ಪುಟಿನ್ ಅವರನ್ನು ವೈಯಕ್ತಿಕವಾಗಿ ಕೇಳಿಕೊಂಡಿದ್ದೇನೆ. ಅವರು ಒಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.

ಬುಧವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಸ್ಕೋ ಮತ್ತೊಂದು ದೊಡ್ಡ ಅಣೆಕಟ್ಟು ಮೇಲೆ ಗುರಿ ಇಟ್ಟಿದೆ ಎಂದು ಎಚ್ಚರಿಸಿದ್ದರು. ಈ ಹೇಳಿಕೆ ಬಳಿಕ ಒಂದು ವಾರದ ಕದನ ವಿರಾಮದ ಘೋಷಣೆ ಹೊರಬಂದಿದೆ.

ಕೀವ್‌ ನಗರ ಚಳಿಗಾಲದಲ್ಲಿ ತೀವ್ರ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಮುಂದಿನ ಒಂದು ವಾರದ ತನಕ ಹವಾಮಾನ ಹೀಗೆಯೇ ಮುಂದುವರಿಯುವ ನಿರೀಕ್ಷೆಯಿದೆ. ಕೆಲವು ಪ್ರದೇಶಗಳಲ್ಲಿ ತಾಪಮಾನವು -30 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ ಎಂದು ಉಕ್ರೇನ್‌ನ ತುರ್ತು ಸೇವೆಗಳ ಇಲಾಖೆ ಎಚ್ಚರಿಸಿದೆ.

ಕದನ ವಿರಾಮ ಯಾವಾಗ?: ಒಂದು ವಾರದ ಕದನ ವಿರಾಮ ಒಪ್ಪಂದವು ಯಾವಾಗ ಪ್ರಾರಂಭವಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಕಳೆದ ವಾರ ಅಬುಧಾಬಿಯಲ್ಲಿ ನಡೆದ ಉಕ್ರೇನ್ ಶಾಂತಿ ಮಾತುಕತೆಯ ಬಳಿಕ ಪೂರ್ಣ ಪ್ರಮಾಣದ ಕದನ ವಿರಾಮ ಘೋಷಣೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

2022ರ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭಿಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲಾಗುತ್ತದೆ ಎಂದು ಘೋಷಣೆ ಮಾಡಿದ್ದು, ಈ ಕುರಿತು ಎರಡೂ ದೇಶಗಳ ಅಧ್ಯಕ್ಷರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಈಗ ಚಳಿಗಾಲದ ಕಾರಣ ಒಂದು ವಾರದ ಕದನ ವಿರಾಮ ಘೋಷಣೆ ಮಾಡುವ ನಿರೀಕ್ಷೆ ಇದೆ. ದಕ್ಷಿಣ ಉಕ್ರೇನ್ ಹೊರತುಪಡಿಸಿ ಎಲ್ಲಾ ಪ್ರದೇಶಗಳು ಫೆಬ್ರವರಿ 1 ರಿಂದ ಫೆಬ್ರವರಿ 4ರ ತನಕ ಭಾರೀ ಶೀತ ಗಾಳಿಯನ್ನು ಎದುರಿಸಲಿವೆ ಎಂದು ಈಗಾಗಲೇ ಎಚ್ಚರಿಕೆ ನೀಡಿದ್ದು, ಇಂತಹ ಸಮಯದಲ್ಲಿ ರಷ್ಯಾ ದಾಳಿ ನಡೆಸಿದರೆ ಜನರಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ.

ಆದರೆ ಉಕ್ರೇನ್‌ನ ಮಾಧ್ಯಮಗಳ ಪ್ರಕಾರ ಯುದ್ಧ ವಿರಾಮ ಇನ್ನೂ ಘೋಷಣೆಯಾಗಿಲ್ಲ. ಅಮೆರಿಕ ಮತ್ತು ರಷ್ಯಾ ದೇಶಗಳು ಉಕ್ರೇನ್ ಕುರಿತು ಯಾವ ತೀರ್ಮಾನ ಕೈಗೊಂಡಿವೆ ಎಂಬುದು ಇನ್ನೂ ಖಚಿತವಾಗಿಲ್ಲ.

ಭಾನುವಾರ ಅಬುಧಾಬಿಯಲ್ಲಿ ತ್ರಿಪಕ್ಷೀಯ ಶಾಂತಿ ಮಾತುಕತೆಗಳು ಪುನಃ ಆರಂಭವಾಗಲಿದೆ. ಯದ್ಧದ ಸಂದರ್ಭ ಸೆರೆಹಿಡಿದ ಖೈದಿಗಳ ವಿನಿಮಯ ಸೇರಿದಂತೆ ಹಲವಾರು ವಿಚಾರಗಳ ಕುರಿತು ಮಾತುಕತೆ ಸಂದರ್ಭದಲ್ಲಿ ಚರ್ಚೆ ನಡೆಸಲಾಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular