ಗದಗ ಜಿಲ್ಲೆಯ ಲಕ್ಕುಂಡಿ ತನ್ನ ಅದ್ಭುತ ಶಿಲ್ಪಕಲೆ ಮತ್ತು ಐತಿಹಾಸಿಕ ಹಿನ್ನೆಲೆಯಿಂದಾಗಿ “ದೇವಾಲಯಗಳ ಸ್ವರ್ಗ” ಎಂದೇ ಪ್ರಸಿದ್ಧವಾಗಿದೆ. ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ (ಜನವರಿ 2026ರಲ್ಲಿ) ಭಾರಿ ನಿಧಿಪತ್ತೆಯಾಗಿದ್ದು, ಲಕ್ಕುಂ ಇಡೀ ರಾಜ್ಯದ ಗಮನ ಸೆಳೆದಿದೆ.
ಲಕ್ಕುಂಡಿಯ ವಾರ್ಡ್ ನಂಬರ್ 4ರಲ್ಲಿರುವ ಗಂಗವ್ವ ಬಸವರಾಜ ರಿತ್ತಿ ಎಂಬುವವರ ಮನೆಯ ಅಡಿಪಾಯ ಅಗೆಯುವಾಗ ನಿಧಿ ಸಿಕ್ಕಿತ್ತು. ರಿತ್ತಿ ಕುಟುಂಬದ 8ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ರಿತ್ತಿ ಮೊದಲು ತಾಮ್ರದ ಪಾತ್ರೆಯನ್ನು ಗುರುತಿಸಿದನು. ಇದರಲ್ಲಿ ಚಿನ್ನದ ಹಾರ, ಬಳೆಗಳು, ಉಂಗುರಗಳು ಮತ್ತು ಕಿವಿ ಓಲೆಗಳಿದ್ದವು. ನಿಧಿ ಪತ್ತೆಯಾದ ಬಳಿಕ ಪುರಾತತ್ವ ಇಲಾಖೆ ಸ್ಥಳದಲ್ಲಿ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದೆ. ಈ ನಿಧಿ ಪತ್ತೆಯಾದ ಬೆನ್ನಲ್ಲೇ, ಜನವರಿ 16, 2026 ರಿಂದ ಕರ್ನಾಟಕ ಸರ್ಕಾರವು ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಅಧಿಕೃತವಾಗಿ ಉತ್ಖನನ ಕಾರ್ಯವನ್ನು ಆರಂಭಿಸಿದೆ.
ನಿಜ ಹಾವು ಪತ್ತೆ
ನಿನ್ನೆ ಮೂರು ಹೆಡೆಯಿರುವ ನಾಗರಹಾವಿನ ಶಿಲೆ ಪತ್ತೆಯಾಗಿತ್ತು, ಈ ಬೆನ್ನಲ್ಲೇ ನಿಜ ನಾಗರಹಾವು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಉತ್ಖನನ ಸ್ಥಳದಲ್ಲಿ ಹಾವು ಓಡಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಲಕ್ಕುಂಡಿಯಲ್ಲಿ ಇಂದು 13 ನೇ ದಿನದ ಉತ್ಖನನ ಕಾರ್ಯ ನಡೆಯುತ್ತಿದ್ದು, ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದೆ. ನಿಜ ಹಾವು ಪತ್ತೆಯಾದ ಬೆನ್ನಲ್ಲೇ ನಿಧಿ ಕಾವಲಿಗೆ ನಾಗಪ್ಪ ಬಂದಿದ್ದಾನೆ ಎಂದು ಊರಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಉತ್ಖನನ ನಡೆಯುವಾಗ ಅಚ್ಚರಿಯ ಎಂಬಂತೆ ಹಾವುಗಳು ಪತ್ತೆಯಾಗುತ್ತಿರುವುದು ಜನರಲ್ಲಿ ಕುತೂಹಲ ಮತ್ತು ಭಕ್ತಿಯನ್ನು ಮೂಡಿಸಿದೆ.

