ಬೆಂಗಳೂರು: ಬಿಜೆಪಿ ಸರ್ಕಾರಕ್ಕಿಂತ ಕಾಂಗ್ರೆಸ್ ಸರ್ಕಾರದಲ್ಲೇ ಭ್ರಷ್ಟಾಚಾರ ಅಧಿಕವಾಗಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ರಾಜ್ಯ ಗುತ್ತಿಗೆದಾರರ ಸಂಘ 37,370 ಕೋಟಿ ರೂ. ಬಾಕಿ ಬಿಲ್ ಪಾವತಿಗೆ ಮಾರ್ಚ್ 5ರ ಗಡುವು ನೀಡಿದೆ. ರಾಜ್ಯದಲ್ಲೆಡೆ ಸರ್ಕಾರಿ ಕಾಮಗಾರಿ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಬಾಕಿ ಬಿಲ್ ಪಾವತಿ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ವರ್ಷಗಳಿಂದ ಸರ್ಕಾರ ಬಾಕಿ ಬಿಲ್ ಬಿಡುಗಡೆ ಮಾಡದ ಕಾರಣ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ, ಬಡ್ಡಿ ಪಾವತಿಸಲಾಗದೆ ವಿಷ ಕುಡಿಯುವ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದ್ದಾರೆ.
ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಗುತ್ತಿಗೆದಾರರಿಗೆ 37 ಸಾವಿರ ಕೋಟಿ ರೂಪಾಯಿ ಬಾಕಿ ಬಿಲ್ ಬಿಡುಗಡೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈ ಸರ್ಕಾರದಲ್ಲಿ ಕಮಿಷನ್ ಮತ್ತು ಭ್ರಷ್ಟಾಚಾರ ಹೆಚ್ಚಾಗಿದೆ. ಮುಖ್ಯಮಂತ್ರಿಗಳು ಅಧಿಕೃತ ಸಭೆ ಕರೆದರೆ ದಾಖಲೆಗಳ ಸಮೇತ ಎಲ್ಲಾ ಮಾಹಿತಿ ನೀಡುತ್ತೇವೆ. ಮಾರ್ಚ್ 5ರೊಳಗೆ ಸ್ಪಂದಿಸದಿದ್ದರೆ ಎಲ್ಲಾ ಕಾಮಗಾರಿಗಳನ್ನು ಬಂದ್ ಮಾಡಲಾಗುವುದು. ಒಂದೇ ಬಾರಿ ಹಣ ನೀಡಲು ಸಾಧ್ಯವಾಗದಿದ್ದರೆ ಹಂತ ಹಂತವಾಗಿಯಾದರೂ ಬಾಕಿ ಬಿಲ್ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

